Mar 18, 2017

ಭುವನಗಿರಿ ಕೋಟೆ ~ Bhuvanagiri fort

ಭುವನಗಿರಿ ಕೋಟೆ - (ಭೊಂಗಿರ್ ಕೋಟೆ)

ನಾನು ಕೆಲಸಕ್ಕೆ ಸೇರಿದಾಗಿಂದ, ಮೊದಲಿನಂತೆ ಐತಿಹಾಸಿಕ ಸ್ಥಳಗಳನ್ನಾಗಲಿ, ಅಥವಾ ಯಾವದೇ ಪ್ರವಾಸ ಮಾಡುವದಕ್ಕಾಗಲಿ ಸಮಯ ಇಲ್ಲದಂತಾಗಿದೆ. ೩- ೪ ತಿಂಗಳುಗಳಿಂದ ಭುವನಗಿರಿ ಕೋಟೆ ನೋಡೋಕೆ ಹೋಗೋಣ ಅಂತ ಪ್ಲಾನ್ ಮಾಡಿ, ಕೆಲಸದ ಒತ್ತಡದಿಂದ ಮುಂದೆ ಹಾಕುತ್ತ ಬಂದಿದ್ದಾಯಿತು. ಆದರೆ ಹೋಗಲು ಆಗಿದ್ದೆ ಇಲ್ಲ. ಜನೆವರಿ ೨೨ ಭಾನುವಾರ ರಜೆ ದಿನ, ಬೆಳಿಗ್ಗೆ ಎದ್ದು ಚಹಾ ಕುಡಿಯುತ್ತ ನಾನು ಫೇಸಬುಕ್ ನೋಡ್ತಾ ಇದ್ದೆ. ಸಿದ್ಧಿಯ ಜೊತೆ ಆಫೀಸನಲ್ಲಿ ಕೆಲಸ ಮಾಡುವರೊಬ್ಬರು ತಮ್ಮ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಅದು ಭುವನಗಿರಿಯಲ್ಲಿ ಹಿಡಿದಿದ್ದ ಫೋಟೋ. ನಾನು ಅದನ್ನು ಸಿದ್ದಿಗೆ ತೋರಿಸಿ ಹೇಳಿದೆ, ನಿಮ್ಮ ಆಫೀಸಿನವರು ಭುವನಗಿರಿಗೆ ನಿನ್ನೆ ಹೋಗಿದ್ರಂತೆ ನೋಡಿ ಎಂದೆ. ಅವರು ನೋಡಿ ನಾವು ಹೋಗಲೇ ಬೇಕು ತುಂಬಾ ದಿನದಿಂದ ಕೇವಲ ಪ್ಲಾನ್ ಮಾಡೋದೇ ಆಯಿತು ಎಂದು, ಅದೇ ಮಧ್ಯಾಹ್ನ ಹೋಗುವದಾಗಿ ಇಬ್ಬರು ನಿರ್ಧರಿಸಿದೆವು.

ನಲಗೊಂಡ ಜಿಲ್ಲೆಯ ಭುವನಗಿರಿಯು ಹೈದೆರಾಬಾದಿನಿಂದ ವಾರಂಗಲ್ ಗೆ ಹೋಗುವ ದಾರಿಯಲ್ಲಿ ಸುಮಾರು  ೬೦ಕಿಮೀ ಅಂತರದಲ್ಲಿ ಭುವನಗಿರಿ ಇರುವದು. ಅಲ್ಲಿಂದ ವಾರಂಗಲ್ ಗೆ ೮೦ ಕಿಮೀ ಮುಂದೆ ಹೋಗಬೇಕು. ಭುವನಗಿರಿ ಹೆಸರು ನಿಜಾಮರ ಕಾಲದಲ್ಲಿ ಭೊಂಗಿರ್ ಎಂತಲೂ ಮಾರ್ಪಟ್ಟಿದೆ. ಭುವನಗಿರಿ ಹೆಸರಿಗೆ ತಕ್ಕ ಹಾಗೆ ಭೂಮಿಯಿಂದ ಆಕಾಶಕ್ಕೆ ಚುಂಬಿಸುವಂತೆ ಎದ್ದುನಿಂತ ಆ ಏಕಶಿಲಾ ಗಿರಿಯು ಎಲ್ಲರ ಮನಸ್ಸನ್ನು ನೋಡಿದ ತಕ್ಷಣ ಸೆಳೆಯುತ್ತದೆ. ಇನ್ನು ಭೊಂಗಿರನ್ನು ಅರ್ಥೈಸುವದು ನನ್ನಿಂದ ಸಾಧ್ಯವಿಲ್ಲ. ಭವಿಷ್ಯ, ಅದನ್ನು ಆ ರೀತಿ ಕರೆಯೋ ಜನರು ಕೂಡ ಅದನ್ನು ಅರ್ಥೈಸಲಾರರು!

ಜನೇವರಿ ೨೨, ೨೦೧೭ -

ಅಂದು ಮಧ್ಯಾಹ್ನ ಸುಮಾರು ೨.೩೦ ಕ್ಕೆ ನಾವು ಹೈದೆರಾಬಾದಿನಿಂದ ಭುವನಗಿರಿಯ ಕಡೆ ಹೊರಟೆವು. ನನಗೆ ಭುವನಗಿರಿಯು ಕೇವಲ ೧.೩೦ ನಿಮಿಷಗಳ ಪ್ರಯಾಣ ಎಂದು ತಿಳಿದುದ್ದರಿಂದ ಹಾಗೂ ಪ್ರತಿದಿನವೂ ಕ್ಯಾಬ್ನಲ್ಲಿ ಆಫೀಸ್ ಗೆ  ಹೋಗಿ ರೂಢಿ ಆಗಿರುವದಿಂದಲೋ ಏನೋ ಟ್ರಾವೆಲ್ ಸಿಕ್ಕ್ನೆಸ್ಸ್ ನ ಯಾವುದೇ ಅಂಶಗಳು ಕಾಣಲಿಲ್ಲ. ಆರಾಮವಾಗೇ ಹೊರಟೆವು.ಸುಮಾರು ೫೫ ಕಿಮೀ ಹೋದ ನಂತರ ಒಂದು ಪೆಟ್ರೋಲ್ ಬಂಕನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಕಾರಿನ ಗ್ಲಾಸ್ ತೊಳೆದುಕೊಂಡು ಮುಂದೆ ನಡೆದೆವು. ಸ್ವಲ್ಪವೇ ದೂರದಲ್ಲಿ ಟೋಲ್ ನಾಕ ಬಂದಿತು. ಅಲ್ಲಿ ಒಬ್ಬರನ್ನು ವಿಚಾರಿಸಿದಾಗ ಅವರು ಇನ್ನು ೨೦-೨೫ ಕಿಮೀ ದೂರ ಹೋಗಬೇಕೆಂದರು. ನನಗೆ ಸಂದೇಹ ಬಂತು, ಇನ್ನು ಅಷ್ಟು ದೂರ ಹೋಗಬೇಕಲ್ಲ ಅನ್ನೋ ಅಸಮಾಧಾನನು ಹುಟ್ಟಿತು. ಅಲ್ಲಿಂದ ೧೦೦ ಮೀ ದೂರದಲ್ಲಿಯೇ ಒಂದು ಮೈಲಿಗಲ್ಲು ಭೊಂಗಿರ್ ೪ ಕಿಮೀ ಎಂದು ತೋರಿಸುತಿತ್ತು. ಆಗ ನಾನು ಸಿದ್ದಿಗೆ ಹೇಳಿದೆ ಮೈಲಿಗಲ್ಲು ಕೇವಲ ೪ ಮೀ ತೋರಿಸ್ತಿದೆ ಅಂತ. ಅವರು ಹೇಳಿದ್ದು ಬಹುಶ ಅದು ೧೪ ಇದ್ದಿರಬಹುದು ೧ ಅಳಿಸಿ ಹೋಗಿ ಕೇವಲ ೪ ಉಳಿದಿರಬಹುದು ಎಂದರು. ಇದನ್ನೇ ಮಾತನಾಡುತ್ತ ಹೋಗಬೇಕಾದರೆ ಮುಂದೆ ಭೊಂಗಿರ್ ಎಂಬ ಹೆಸರಿನ ಫಲಕದ ಜೊತೆ ಊರೂ ಕೂಡ ಕಂಡಿತು. ನಮ್ಮಿಬ್ಬರಿಗೂ ತುಂಬಾ ಸಂತೋಷವಾಯಿತು. ಕಾರು ಹೈವೇ ಬಿಟ್ಟು ಊರಿಗೆ ಹೋಗುವ ದಾರಿ ಹಿಡಿಯಿತು.

​ಊರೊಳಗೆ ಪ್ರವೇಶಿಸಿದ ನಂತರ ಒಂದು ಪುಟ್ಟ ಅಂಗಡಿಯಲ್ಲಿ ವಿಚಾರಿಸಿದಾಗ ಅವರು ಕೋಟೆಗೆ ಹೋಗುವ ದಾರಿಯನ್ನು ಸೂಚಿಸಿದರು. ಆ ದಾರಿಯಲ್ಲೇ ಹೊರಟೆವು ತುಂಬಾ ಇಕ್ಕಟ್ಟಾದ ರಸ್ತೆ ಸಿಕ್ಕಿತು. ಆದರೆ ರಸ್ತೆ ಮಾತ್ರ ಚನ್ನಾಗೇ ಇತ್ತು. ಹಾಗೆ ೫ ನಿಮಿಷಗಳ ಡ್ರೈವ್ ಆದನಂತರ ದೊಡ್ಡ ರಸ್ತೆಯನ್ನು ಸೇರಿದೆವು. ಅದು ಹೈವೇದಿಂದ ನೇರವಾಗಿ ಭುವನಗಿರಿಯ ಬೆಟ್ಟವನ್ನು ತಲುಪುವ ರಸ್ತೆಯಾಗಿತ್ತು. ನಾವು ಹಾಗೆ ಬಂದಿದ್ದಾರೆ ಬಹುಶ ನಮಗೆ ಇನ್ನು ಸರಳವಾಗ್ತಿತ್ತೇನೋ. ಅಂತೂ ಬೆಟ್ಟದ ಹತ್ತಿರ ಬಂದು ನೋಡಿದಾಗ ನನಗೆ ಆಶ್ಚರ್ಯವಾಯಿತು! ಏಕೆಂದರೆ ಬೆಟ್ಟವು ನಾನು ಮೊದಲೇ ತಿಳಿಸಿರುವಂತೆ ಏಕಶಿಲಾ ೧೬೦ಮೀ ಎತ್ತರದ ಗುಡ್ಡ.ಅದರ ಮೇಲೆ ಕೋಟೆ ಇದೆ.ಅಬ್ಬಾ! ನಾನು ಕೆಳಗೆ ನಿಂತುಕೊಂಡೆ ಸುಸ್ತಾದೆ! ಸಿದ್ದಿಗೆ ಕೇಳಿದೆ ಇದನ್ನ ಹೆಂಗೆ ಹತ್ತೋದು? ಅಂತ. ಏನಾಗಲ್ಲ ಬಾ ಆರಾಮಾಗೆ ಹತ್ತಬಹುದು ಅಂತ ಹೇಳಿ ಟಿಕೆಟ್ ತೆಗೆದುಕೋ ಎಂದು ತಾವು ಕ್ಯಾಮೆರಾ ಸಜ್ಜು ಮಾಡಿಕೊಳ್ಳುವದರಲ್ಲಿ ನಿರತರಾದರು. ನಾನು ಟಿಕೆಟ್ ತೆಗೆದುಕೊಳ್ಳಲು ಹೋಗುತ್ತಿರುವಾಗ ಒಬ್ಬ ಹಣ್ಣು ಮಾರುವ ಹೆಂಗಸು ಹಣ್ಣು ತಗೋಳಿ ಮೇಡಂ ಮೇಲೆ ಏನು ಸಿಗಲ್ಲ ಅಂತ ಕೂಗಿದಳು. ನಾನು ಸಿದ್ದಿ ಹತ್ರ ಹೋಗಿ ಮೇಲೆ ಏನು ಸಿಗಲ್ವಂತೆ ಏನಾದ್ರು ತಗೋಳಿ ಅಂತ ಹೇಳಿದೆ. ಆಯಿತು ಎಂದು ಅವರು ಕಿರಾಣಿ ಅಂಗಡಿಯ ಕಡೆ ನಡೆದರು. ನಾನು ಟಿಕೆಟ್ ತಗೊಂಡೆ. ಅವರು ೨೫೦ಎಂಎಲ್ ನ ಸ್ಪ್ರೈಟ್ ೨ ಬಾಟಲಿ ಹಿಡಿದುಕೊಂಡು ಬಂದರು. ಇಷ್ಟು ದೊಡ್ಡ ಬೆಟ್ಟ ಹತ್ತೋದಿದೆ ಮಧ್ಯಾಹ್ನ ಊಟ ಬೇರೆ ಮಾಡಿಲ್ಲ ಇವರೇನು ಬರಿ ೨ ಸಣ್ಣ ಬಾಟಲಿ ಕೂಲ್ಡ್ರಿಂಕ್ಸ್ ತರ್ತೀದಾರೆ ಎಂದುಕೊಂಡೆ. ಆಮೇಲೆ ನಂಗೆ ತಿನ್ಲಿಕ್ಕೆ ಏನು ತರ್ಲಿಲ್ವ? ಅಂತ ಕೇಳಿದೆ. ಏನು ಬೇಡ ಬಿಡು ಅಂತ ತಮ್ಮಷ್ಟಕ್ಕೆ ತಾವೇ ನಿರ್ಧಾರ ತೆಗೆದುಕೊಂಡು ಬಿಟ್ರು. ನಂಗೆ ಬೇಕು ಅಂತ ನಾನು ಹೇಳಿದೆ. ಸರಿ ನೀನೇ ಹೋಗಿ ತಗೋ ಅಂತ ಹೇಳಿದರು. ನಾನು ಹೋಗಿ ಒಂದು ಚಿಪ್ಸ್ ಪ್ಯಾಕೆಟ್ ತಗೊಂಡು ಬಂದೆ. ಆಮೇಲೆ ಬೆಟ್ಟ ಏರಲು ಶುರು ಮಾಡಿದೆವು.


ಇನ್ನು ಬೆಟ್ಟದ ಕಾಲು ಭಾಗ ಕೂಡ ಏರಿರಲಿಲ್ಲ ನನಗೆ ಸುಸ್ತಾಗಿ ಏದುಸಿರು ಬರಲು ಶುರುವಾಯ್ತು. ಅಲ್ಲಲ್ಲಿ ಜನ ಕುಳಿತು ತಮ್ಮ ದಣಿವು ಆರಿಸಿಕೊಳ್ಳುತಿದ್ದರು. ನಾನು ಕುಳಿತುಕೊಳ್ಳಲು ಹೋದೆ. ಅಷ್ಟರಲ್ಲಿ ಸಿದ್ದಿ ನೋಡಿ ಕುಳಿತುಕೋಬೇಡ ಬೇಕೆಂದರೆ ಸ್ವಲ್ಪ ಹೊತ್ತು ನಿಂತುಕೊಂಡೆ ದಣಿವು ಆರಿಸಿಕೋ. ಬೆಟ್ಟ ಏರುವಾಗ ಕುಳಿತುಕೊಳ್ಳುವದು ಮಧ್ಯ ನೀರು ಕುಡಿಯೋದು ಸರಿಯಲ್ಲ ಎಂದರು. ಸರಿ ಎಂದು ಸ್ವಲ್ಪ ಹೊತ್ತು ನಿಂತಿದ್ದು ಮತ್ತೆ ಏರಲು ಶುರು ಮಾಡಿದೆವು. ನಮ್ಮ ಹಿಂದೆಯೇ ಸ್ವಲ್ಪ ಕಾಲೇಜು ಹುಡುಗರು ಹುಡುಗಿಯರು ಕೂಡ ಬೆಟ್ಟ ಏರುತ್ತಿದ್ದರು. ನನಗೆ ಸಂದೇಹ ಇತ್ತು ಅಲ್ಲೂ ಕೂಡ ಯಾರಾದರೂ ಸಿದ್ಧಿಯನ್ನು ಹೊರದೇಶದವರು(foreigner) ಎಂದುಕೊಳ್ಳುತ್ತಾರೆ ಎಂದು. ಅದೇ ಆಯಿತು ಆ ಹುಡುಗರು ಸಿದ್ದಿಯ ಜೊತೆಗೆ ನನ್ನು ಕೂಡ ಹೊರದೇಶದವಳು ಎಂದುಕೊಂಡರು. ಚಾರ್ಮಿನಾರ್ ನೋಡಲು ಹೋದಾಗ ಕೂಡ ಇದೆ ರೀತಿ ಆಗಿ ಅಲ್ಲಿನ ಸೆಕ್ಯೂರಿಟಿ ನನ್ನನ್ನೇನೋ ೫ ರೂ ಟಿಕೆಟಿನೊಂದಿಗೆ ಒಳಗೆ ಬಿಡಲು ರೆಡಿ ಆದ. ಆದರೆ ಸಿದ್ಧಿಯನ್ನು foreigner ಎಂದುಕೊಂಡು ೧೦೦ ರೂ ಟಿಕೆಟ್ ತರಬೇಕು ಇಲ್ಲ ಭಾರತದ ಯಾವುದಾದರೂ ಭಾಷೆ ಮಾತಾಡಬೇಕು ಎಂದು ಹೇಳಿದ. ನಂತರ ಸಿದ್ದಿ ಹಿಂದಿ ಭಾಷೆ ಮಾತನಾಡಿ ಸೆಕ್ಯೂರಿಟಿಯ ಗೇಟ್ ಪರೀಕ್ಷೆ ಪಾಸಾಗಿ ಒಳಗೆ ಬರುವದರಲ್ಲಿ ಸಫಲರಾದರು. :)
ಬೆಟ್ಟ ಹತ್ತಲು ಅನುಕೂಲವಾಗಲಿ ಎಂದು ಈಗ ಬೆಟ್ಟದಲ್ಲೇ ಮೆಟ್ಟಿಲುಗಳನ್ನು ಕೊರೆದಿದ್ದರೆ, ಮಧ್ಯ ಸ್ವಲ್ಪ ಮೊದಲಿನ ಮೆಟ್ಟಿಲುಗಳು ಕೂಡ ಇವೆ. ಬೆಟ್ಟ ಏರುವಾಗ ಒಟ್ಟು ೩ ಹೆಬ್ಬಾಗಿಲುಗಳನ್ನು ದಾಟಿದೆವು. ಪ್ರತಿಯೊಂದು ಬಾಗಿಲ ಬಳಿಯೂ ಒಂದು ಇಲ್ಲವೇ ಎರಡು ಬುರ್ಜುಗಳನ್ನು ಕಾಣಬಹುದು.ಎಲ್ಲ ಕೋಟೆಗಳಿಗೂ ಇರುವಂತೆ ಇಲ್ಲಿಯೂ ಕೂಡ ಗುಪ್ತ ದ್ವಾರಗಳನ್ನು ಮಾಡಿದ್ದರು. ಕೋಟೆ ಕಟ್ಟುವಾಗ ತಮ್ಮ ರಕ್ಷಣೆಯ ಕುರಿತು ಅವರು ಎಷ್ಟೊಂದು ಯೋಚನೆ ಮಾಡಿದ್ದರು ಎಂದು ಈ ಕೋಟೆಯ ವಿನ್ಯಾಸ ನೋಡಿದರೆ ತಿಳಿಯುತ್ತದೆ. ೩ ದ್ವಾರಗಳನ್ನು ದಾಟಿದ ಮೇಲೆ ಒಂದು ಸಮತಟ್ಟಾದ ಜಾಗ ಸಿಗುವದು. ಅಲ್ಲಿ ಒಂದು ಚಿಕ್ಕ ಮಂಟಪ ಹಾಗೂ ೨ ಕೋಣೆಗಳು ಕಂಡವು. ಸಿದ್ದಿ ಅಲ್ಲೇ ಇದ್ದ ಫಿರಂಗಿ ಕಟ್ಟೆಯ ಹತ್ತಿ ಸುತ್ತಲಿನ ಫೋಟೋ ತೆಗೆದುಕೊಂಡರು. ಅಲ್ಲಿಯೇ ಬಂಡೆಗಳು ಜಾರುಬಂಡೆಗಳ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದ್ದವು.




ಅವರು ಈ ಬೆಟ್ಟದ ಮೇಲೆ ಕೋಟೆ ಕಟ್ಟಿಕೊಂಡು ನೀರಿಗೆಲ್ಲ ಏನು ಮಾಡಬಹುದು ಎಂದು ನಾವು ಯೋಚಿಸಬಹುದು. ಆದರೆ ಅಲ್ಲಿ ನೀರಿನ ವ್ಯವಸ್ಥೆ ಎಷ್ಟೊಂದು ಚೆನ್ನಾಗಿ ಮಾಡಿಕೊಂಡಿದ್ದರೆಂದರೆ ಅವರು ವರ್ಷ ಪೂರ್ತಿ ಮಳೆಯ ನೀರ ಮೇಲೆಯೇ ಅವಲಂಬಿತರಾಗಿದ್ದರು ಎನಿಸುತ್ತದೆ.ಗುಡ್ಡದಲ್ಲೇ ಚಿಕ್ಕ ಚಿಕ್ಕ ಗೋಡೆ ಕಟ್ಟುವದರ ಮೂಲಕ ತಗ್ಗು ಪ್ರದೇಶಗಳನ್ನು ಹೊಂಡಗಳನ್ನಾಗಿ ಮಾರ್ಪಡಿಸಿದ್ದರು. ನಾವು ಎನಿಸಿಲ್ಲ ಆದರೆ ಬಹುಶ ೭ಕ್ಕಿಂತಲೂ ಹೆಚ್ಚು ದೊಡ್ಡ ಹೊಂಡಗಳು ಇರಬಹುದು.


ಸಮತಟ್ಟಾದ ಜಾಗದಿಂದ ಇನ್ನು ಸ್ವಲ್ಪ ಮೇಲೆ ಹತ್ತಬೇಕಾಗಿತ್ತು. ಅಲ್ಲಿ ಮೆಟ್ಟಿಲುಗಳು ತುಂಬಾ ಚಿಕ್ಕವಾಗಿದ್ದವು. ಸ್ವಲ್ಪ ಹುಷಾರಾಗಿಯೇ ಏರಿದೆವು. ಸಿದ್ದಿ ಅಲ್ಲಲ್ಲಿ ನಿಂತು ಈ ಎಲ್ಲ ಅದ್ಭುತಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತ ಬೆಟ್ಟ ಹತ್ತುತ್ತಿದ್ದರು. 


ನಾನು ಕೂಡ ಹಿಂದೆ ಹಿಂದೆಯೇ ನಡೆಯುತ್ತಿದ್ದೆ. ಅಂತೂ ಬೆಟ್ಟದ ತುದಿ ಮುಟ್ಟಿದೆವು. ಅಲ್ಲಿ ನಾವು ಕಂಡಿದ್ದು ಅರಮನೆಯ ಅವಶೇಷಗಳು, ಫಿರಂಗಿ ಕಟ್ಟೆ, ಹೊಂಡದಿಂದ ನೀರನ್ನು ಸೇದಿ ಅರಮನೆಗೆ ಸಾಗಿಸುವದಕ್ಕಾಗಿಯೇ ಕಟ್ಟಿರುವಂತಹ ಒಂದು ಕಟ್ಟಡಕ್ಕೆ ಹೊಂದಿಕೊಂಡ ಟ್ಯಾಂಕು. ಅಬ್ಬಾ! ಅವರು ಆಗಿನ ಕಾಲದಲ್ಲೇ ಇಷ್ಟೊಂದು ಯೋಚನೆ ಮಾಡಿದ್ದನ್ನು ನೋಡಿದರೆ ನಿಜವಾಗಲೂ ಆಶ್ಚರ್ಯವಾಗುತ್ತದೆ. ಅರಮನೆಯ ಹತ್ತಿರದಲ್ಲೇ ಒಂದು ಈಜುಕೊಳ. ನೀರು ಶೇಖರಣೆಗಾಗಿ ಮಾಡಿರುವ ಚಿಕ್ಕ ಚಿಕ್ಕ ಟ್ಯಾಂಕುಗಳು. ಮೇಲೇಯೂ ಕೂಡ ಒಂದು ದೊಡ್ಡ ಹೋಂಡಾ. ಆ ಹೊಂಡದ ಹೊರಭಾಗದ ಮೇಲೆ ಹನುಮಂತನ ಮೂರ್ತಿಯನ್ನು ಕೆತ್ತಲಾಗಿದೆ. ಇಷ್ಟೆಲ್ಲ ನೋಡುವದರಲ್ಲಿ ಸಂಜೆಯೇ ಆಗಿತ್ತು.


ಮೇಲೆ ಗಾಳಿ ಎಷ್ಟೊಂದು ಜೋರಾಗಿ ಬಿಸುತ್ತಿತ್ತೆಂದರೆ ಮನುಷ್ಯನನ್ನು ಸಹ ಒಂದು ಕ್ಷಣಕ್ಕೆ ತಳ್ಳಿದಂತಹ ಭಾಸವಾಗುತ್ತಿತ್ತು.ನಾನು ಸ್ವಲ್ಪ ಸುತ್ತಾಡಿ ನೋಡಿ ಒಂದು ಜಾಗ ಹಿಡಿದು ಕೂತು ನನ್ನ ಚಿಪ್ಸ್ ಹಾಗೂ ಕೂಲ್ಡ್ರಿಂಕ್ಸ್ ಮುಗಿಸುವದರಲ್ಲಿ ನಿರತಳಾದೆ. ಸಿದ್ದಿ ಇನ್ನು ಚನ್ನಾಗಿ ಜಾಗವನ್ನು ಪರಿಶೀಲಿಸುತ್ತಾ ಕ್ಯಾಮೆರಾದೊಂದಿಗೆ ಇಡೀ ಬೆಟ್ಟವನ್ನೊಮ್ಮೆ ಪ್ರದಕ್ಷಿಣೆ ಹಾಕತೊಡಗಿದರು. ಎಲ್ಲ ತಿರುಗಾಡಿ ಫೋಟೋ ತೆಗೆದುಕೊಂಡು ಮುಗಿಸುವಷ್ಟರಲ್ಲಿ ಸಂಜೆ ಸುಮಾರು ೬.೪೫ ಆಗಿತ್ತು. ಸೂರ್ಯಾಸ್ತದ ಫೋಟೋ ತೆಗೆದುಕೊಂಡು ಬೆಟ್ಟ ಇಳಿದೆವು.ಅಲ್ಲಿಯೇ ಪಕ್ಕದಲ್ಲಿ ಬಿಸಿಬಿಸಿ ಮಿರ್ಚಿ ಮತ್ತು ಆಲೂ ಬಜ್ಜಿ ಪಾರ್ಸೆಲ್ ತೆಗೆದುಕೊಂಡು ತಿನ್ನುತ್ತಾ ಕಾರನ್ನು ಹೈದೆರಾಬಾದ್ ಹೋಗುವ ದಿಕ್ಕಿಗೆ ತಿರುಗಿಸಿದೆವು.ಅಷ್ಟರಲ್ಲಿ ಸೂರ್ಯ ಮುಳುಗಿ ಕತ್ತಲಾವರಿಸಿತ್ತು.ಬಹುಶ ಇನ್ನೊಂದು ತಾಸು ಮೊದಲೇ ನಾವು ಹೋಗಿದ್ದಾರೆ ಇನ್ನು ಜಾಸ್ತಿ ನೋಡಬಹುದಿತ್ತು. 
ಭುವನಗಿರಿ ಕೋಟೆಯ ಕುರಿತು ಹೇಳಬೇಕಾದಲ್ಲಿ ಈ ಕೋಟೆಯನ್ನು ೧೦ನೇ ಶತಮಾನದಲ್ಲಿ ಚಾಲುಕ್ಯರ ರಾಜನಾದ ೬ನೆ ತ್ರಿಭುವನಮಲ್ಲ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿಸಲಾಯಿತೆಂದು ಅದರ ಮೊದಲ ಹೆಸರು ತ್ರಿಭುವನಗಿರಿ ಎಂದಿತ್ತೆಂದು ಇತಿಹಾಸದ ದಾಖಲೆಯಲ್ಲಿದೆ.

ಅಂತೂ ತುಂಬಾ ದಿನದ ಸಿದ್ದಿಯ ಕನಸು ಫಲಿಸಿತು ಅನ್ನೋ ಸಂತೋಷದಲ್ಲಿ ಮಾತನಾಡುತ್ತ ಮರಳಿ ಮನೆಗೆ ನಡೆದೆವು.ಹೈದೆರಾಬಾದ್ ಬರುತ್ತಲೇ ಗೂಗಲ್ ಮ್ಯಾಪ್ ಸಹಾಯ ಪಡೆದು ಮನೆಗೆ ಹೋಗುವುದು ನಮ್ಮ ರೂಢಿ. ಈ ಸಲವೂ ಕೂಡ ಅದನ್ನೇ ಮಾಡಿ ದಾರಿ ತಪ್ಪಿ ಮುಖ್ಯರಸ್ತೆಯನ್ನು ಬಿಟ್ಟು ಗಲ್ಲಿ-ಗಿಲ್ಲಿ ತಿರುಗಿ ಮನೆ ಸೇರುವದರಲ್ಲಿ ಸಂಜೆ ೮.೪೫ ಆಗಿತ್ತು. IT ಕಂಪನಿಯಲ್ಲಿ ಕೆಲಸ ಮಾಡುವ ನಮಗೆ ಇದೊಂದು ತರ ಮನಸಿಗೆ ಖುಷಿ ಕೊಡುವ ವಿರಾಮವಾಗಿತ್ತು
.........

11 comments:

  1. ನಿಜವಾಗಿಯೂ ಪರಿಪೂರ್ಣ ಕವರೇಜ್ ..
    " ಏನೂ ಬೇಡ,ನಡಿ... ", ಮತ್ತು "GATE ಎಗ್ಸಾಮ್ " ಬಹಳ ಚೆನ್ನಾಗಿ ಮೆಂಶನ್ ಆಗಿದೆ...

    ReplyDelete
  2. @Anil - ಧನ್ಯವಾದಗಳು ಅನಿಲ್, ನಿಮ್ಮ ಕಮೆಂಟ್ ನೋಡಿ ಸಂತೋಷವಾಯ್ತು.
    @Saraswati @Aravind - Thank you guys.

    ReplyDelete
  3. ಅಭಿನಂದನೆಗಳು ಪುಷ್ಬ ಮೇಡಂ.. ಬಹಳ ಸೊಗಸಾಗಿ ಹಣೆದ ಬರಹ.., ಓದುತ್ತಾ ಹೊದಂತೆ, ಬಹುಷಃ ನಾವೂ ಕೂಡ ನಿಮ್ಮ ಜೊತೆ ಭುವನಗುರಿ ಕೋಟೆಗೆ ಭೇಟಿ ನೀಡಿದ್ದೇವೆ ಎಂದು ಅನಿಸುತ್ತದೆ.
    👏🏻👏🏻👏🏻
    - ಶ್ರೀನಿವಾಸ್ ಖರೀದಿ @ ಸೀನಿ_ಮನ.

    ReplyDelete
    Replies
    1. ಧನ್ಯವಾದಗಳು ಶ್ರೀನಿವಾಸ. ಜಾಗ ನನ್ನ ಬರಹಕ್ಕಿಂತ ಬಹಳ ಚಂದ ಅಯ್ತ್ರಿ. ನೀವು ಒಂದ್ ಸಲ ಹೋಗಿ ಬರ್ರಿ.

      Delete
  4. Siddu and Pushpa, ಜಾಗ ಪರಿಚಯ ಚೆನ್ನಾಗಿ ಕೊಟ್ಟಿಧೀರ

    ReplyDelete