೧೮ ಆಗಸ್ಟ್ ೨೦೧೭ ಧಾರವಾಡದಿಂದ ಹೈದರಾಬಾದ್ಗೆ ಹೊರಡಲು ಬೆಳಿಗ್ಗೆ ಸುಮಾರು ೬ ಗಂಟೆಗೆ ಮನೆ ಬಿಟ್ಟೆವು. ಸಿದ್ದಿ ಈಗಲೂ ಕೂಡ ಕೆಲವು ಜಾಗಗಳನ್ನು ನೋಡಲು ಮೊದಲೇ ಯೋಚಿಸಿದ್ದರು. ಹಂಪಿ, ಆನೆಗುಂದಿ ಎಲ್ಲ ಸುತ್ತಾಡಿ ಚರ್ಮ ಸುಟ್ಟಿದ್ದರೂ ಸಿದ್ದಿ ಜಾಗಗಳನ್ನು ನೋಡುವ ಯಾವ ಅವಕಾಶವನ್ನೂ ಬಿಡುವದಿಲ್ಲ ಎಂದು ನನಗೆ ಗೊತ್ತಿತ್ತು. ಹುಬ್ಬಳ್ಳಿಯಲ್ಲಿರುವ ನಮ್ಮ ಸಂಬಂಧಿಕರನ್ನು ಸಂಧಿಸಿ, ಸ್ವಲ್ಪ ಸಮಯ ಅವರೊಡನೆ ಕಳೆದು ಮುಂದೆ ಹೋಗುವದರಲ್ಲಿ ಸ್ವಲ್ಪ ತಡವೇ ಆಯಿತು.ಆದ್ದರಿಂದ ಕಲ್ಬುರ್ಗಿಯಲ್ಲಿ ಉಳಿದುಕೊಳ್ಳಬೇಕು ಅನ್ನುವ ವಿಚಾರವನ್ನು ಬದಲಿಸಿ ಬಿಜಾಪುರದಲ್ಲೇ ಉಳಿಯುವದೆಂದು ನಿರ್ಧರಿಸಿದೆವು.
ಇದು ಬಿಜಾಪುರಕ್ಕೆ ನನ್ನ ಸಿದ್ಧಿಯೊಂದಿಗೆ ಎರಡನೇ ಭೇಟಿ. ಮೊದಲ ಸಲ ಬಂದಾಗ ಯಾವ ಜಾಗಗಳನ್ನು ನೋಡಲಿಕ್ಕೆ ಆಗಿರಲಿಲ್ಲವೋ ಅವುಗಳನ್ನು ನೋಡುವದು ಎಂದು ನಿರ್ಧಾರವಾಗಿತ್ತು. ಅದರಂತೆ ಬಿಜಾಪುರಕ್ಕೆ ಬರುತ್ತಿದ್ದಂತೆ ಲಂಡಾ ಕಸಬ್ ತೋಪನ್ನು ನೋಡಿ ಸಾಠ ಕಬರ್ ನೋಡಲು ಹೊರಟೆವು. ಈ ದಿನ ಅಷ್ಟೊಂದು ಬಿಸಿಲಿರಲಿಲ್ಲ. ನಮಗೂ ಸರಿಯಾದ ದಾರಿ ತಿಳಿದಿರಲಿಲ್ಲ. ಗೂಗಲ್ ಡೈರೆಕ್ಷನ್ ಮ್ಯಾಪ್ ಆನ್ ಮಾಡಿದೆ. ಸ್ವಲ್ಪ ದೂರ ಹೋದ ಮೇಲೆ ಅದು ಕೂಡ ಸರಿಯಾದ ದಾರಿ ತೋರಿಸದಾಯಿತು. ಅಲ್ಲಿ ಯಾರನ್ನಾದರೂ ಕೇಳೋಣ ಎಂದು ಕಾರ್ ಕಿಟಕಿ ಇಳಿಸಿ ಇಬ್ಬರಿಗೆ ಕೈ ಮಾಡಿದೆ. ಅವರು ನಾವು ಕೇಳುವ ಮುಂಚೆಯೇ ನಮಗೆ ಆ ಕಡೆ ಹೋಗಬೇಕೆಂದು ಹೇಳಿದರು. ಬಹುಶ ತುಂಬಾ ಜನ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡಿದ ಮಹಾನುಭಾವರಿರಬೇಕು .. ಅವರಿಗೆ ಧನ್ಯವಾದ ಹೇಳಿ ಅವರು ಹೇಳಿದತ್ತ ಹೋದೆವು. ಸಿದ್ದಿ ಮೊದಲೊಮ್ಮೆ ಇಲ್ಲಿಗೆ ಬಂದಿದ್ದರು. ಆದ್ದರಿಂದ ಸಮೀಪ ಹೋದಾಗ ಅವರಿಗೆ ಜಾಗ ನೆನಪಿಗೆ ಬಂತು. ಕಾರ್ ಅಲ್ಲಿಯವರೆಗೂ ಹೋಗಲ್ಲ ಇಲ್ಲೇ ನಿಲ್ಲಿಸಿ ಹೋಗೋಣ ಎಂದರು. ಸರಿ ಎಂದು ಕಾರ್ ಅಲ್ಲೇ ನಿಲ್ಲಿಸಿ ನಡೆಯತೊಡಗಿದೆವು. ಮಣ್ಣಿನ ಇಕ್ಕಟ್ಟಾದ ದಾರಿ, ಎರಡು ಕಡೆ ಕಂಟಿ ಬೇಲಿಗಳು. ಅದರಲ್ಲೂ ಬಣ್ಣ ಬಣ್ಣದ ಹೂಗಳು ಹಾಗೂ ಸಾಕಷ್ಟು ಬಣ್ಣ ಬಣ್ಣದ ಚಿಟ್ಟೆಗಳು. ನಡೆಯಲು ತುಂಬಾ ಖುಷಿ ಎನಿಸಿತು. ತುಂಬಾ ದೂರ ಏನಿಲ್ಲ ಸುಮಾರು ೨೦೦ ಮೀ ದೂರ ನಡೆದರೆ ಸಾಕು ನಾವು ಸಾಠ ಕಬರ್ ಬಳಿ ತಲುಪಬಹುದು.
ಸಾಠ ಕಬರ್ ಬೇರೆ ಐತಿಹಾಸಿಕ ಸ್ಮಾರಕಗಳಿಗಿಂತ ಭಿನ್ನವಾಗಿದೆ. ಇದರ ಕುರಿತು ಸರ್ಕಾರ ಅಷ್ಟೊಂದು ಚನ್ನಾಗಿ ನಿಗಾ ವಹಿಸಿಲ್ಲ. ಇಲ್ಲಿ ಹೆಚ್ಚು ಜನ ಬರದೇ ಇರುವ ಕಾರಣದಿಂದ ಈ ಜಾಗ ಬಿಕೋ ಎನ್ನುತ್ತಿರುತ್ತದೆ. ಇಲ್ಲಿರುವ ಅರವತ್ತು ಗೋರಿಗಳಲ್ಲಿ ಕೆಲವೊಂದಿಷ್ಟು ಒಡೆದಿವೆ, ಕೆಲವು ಬಿರುಕು ಬಿಟ್ಟಿವೆ, ಕೆಲವುದರ ಮೇಲೆ ಕಸ ಬೆಳೆದಿದೆ. ಇದು ಬಿಜಾಪುರದ ಐತಿಹಾಸಿಕ ಸ್ಮಾರಕಗಳಲ್ಲೇ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ. ಆದರೂ ಕೂಡ ಬಿಜಾಪುರಕ್ಕೆ ಬಂದ ಪ್ರವಾಸಿಗರು ಇದನ್ನು ನೋಡದೆ ಹಿಂತಿರುಗಲು ಇಷ್ಟ ಪಡುವದಿಲ್ಲ. ಎಣಿಸಿ ನೋಡಿದರೆ ಇಲ್ಲಿ ಒಟ್ಟು ಅರವತ್ತಮೂರು ಗೋರಿಗಳನ್ನು ಕಾಣಬಹುದು. ಗೋರಿಗಳು ಅಷ್ಟೊಂದು ಆಕರ್ಷಕವಾದ ವಿನ್ಯಾಸವನ್ನೇನು ಹೊಂದಿಲ್ಲ, ಬೇರೆ ಐತಿಹಾಸಿಕ ಗೋರಿಗಳಿಗೆ ಹೋಲಿಸಿದರೆ ತುಂಬಾ ಸಾಧಾರಣ ವಿನ್ಯಾಸದಲ್ಲಿವೆ.
ಗೋರಿಗಳ ಕಟ್ಟೆಗೆ ಹತ್ತಿಕೊಂಡು ಒಂದು ಕಟ್ಟಡವಿದೆ. ಅದರ ಮೇಲೆ ಹತ್ತಲು ಮೆಟ್ಟಿಲುಗಳನ್ನು ಕೂಡ ನಾವು ಕಾಣಬಹುದು. ಅದರ ಕಟ್ಟಡ ಬೇರೆ ಮುಸ್ಲಿಂ ಐತಿಹಾಸಿಕ ಕಟ್ಟಡಗಳ ವಿನ್ಯಾಸದಲ್ಲೇ ಇದೆ. ಮೇಲೆ ಹತ್ತಿ ನೋಡಿದರೆ ಆ ಅರವತ್ತಮೂರು ಗೋರಿಗಳ ವಿಶಾಲ ನೋಟ ಕಾಣಬಹುದು.
ಈ ಕೆಳಗಿನ ಚಿತ್ರ ಗೋರಿಗಳ ಹಿಂದೆಯೇ ಇರುವ ಬಾವಿಯದು. ಇಲ್ಲಿ ನಾವು ಒಂದು ಮಸೂತಿ ಹಾಗೂ ಒಂದು ಟಾವರ್ ಕಟ್ಟಡವನ್ನು ಕೂಡ ನೋಡಬಹುದು. ಇದೇ ಬಾವಿಯಲ್ಲಿ ನೂಕಿ ಈ ಅರವತ್ತಮೂರು ಜನರನ್ನು ಕೊಂದಿದ್ದು ಎಂದು ಹೇಳಲಾಗುತ್ತದೆ.
ಈ ಮಸೂತಿಯ ಕಟ್ಟಡದ ಮೂರು ಅಂತಸ್ತುಗಳನ್ನು ನಾವು ಕಾಣಬಹುದು. ಒಂದಸ್ತಿನಿಂದ ಮತ್ತೊಂದಕ್ಕೆ ಹೋಗಲು ಮಸೂತಿಯ ಒಳಗಿನಿಂದ ಮೆಟ್ಟಿಲುಗಳಿವೆ. ಕಟ್ಟಡವು ತುಂಬಾ ಆಕರ್ಷಕವಾಗೇ ಇದೆ. ಆದರೆ ಅದರ ನಿರ್ವಹಣೆ ಅಷ್ಟೊಂದು ಚನ್ನಾಗಿಲ್ಲ.
ಇಲ್ಲಿ ಕಾಣುವ ಬುರುಜು, ಬಾವಿಯಿಂದ ನೀರು ಸೇದಿ ಬೇರೆಡೆಗೆ ನೀರು ಸಾಗಿಸುವ ಕಟ್ಟಡದಂತೆ ಕಾಣುತ್ತದೆ.
ಕೆಳಗಿನ ಚಿತ್ರದಲ್ಲಿ ಮಸೂತಿ ಒಳಗಿನಿಂದ ಮೇಲೆ ಬರಲು ದಾರಿಯನ್ನು ಕಾಣಬಹುದು.
ಮಸೂತಿಯ ಒಳಗಿನ ಚಿತ್ರ. ಈ ರೀತಿಯ ಕಟ್ಟಡ ವಿನ್ಯಾಸವನ್ನು ನಾವು ಸಾಮಾನ್ಯವಾಗಿ ಬಹಳಷ್ಟು ಐತಿಹಾಸಿಕ ಮುಸ್ಲಿಂ ಕಟ್ಟಡಗಳಲ್ಲಿ ಕಾಣಬಹದು.
ಮಸೂತಿಯ ಹೊರಗಿನಿಂದ ತೆಗೆದ ಚಿತ್ರ.
ಅರವತ್ತು ಗೋರಿಗಳ ಕಥೆ....
ಈ ಅರವತ್ತಮೂರು ಗೋರಿಗಳ ಕತೆ ತುಂಬಾ ರೋಮಾಂಚಕ ಹಾಗೂ ದುಃಖದಿಂದ ಕೂಡಿದೆ. ಈ ಗೋರಿಗಳು ಆಫ್ಜಲ್ ಖಾನ್ ಎಂಬ ಸೈನ್ಯಾಧಿಕಾರಿಯ ಹೆಂಡತಿಯರದೆಂದು ಹೇಳಲಾಗುತ್ತದೆ. ಆಫ್ಜಲಖಾನನು ಬಿಜಾಪುರ್ ಸುಲ್ತಾನ್ ಅಲಿ ಆದಿಲ್ ಶಾಹ್ ೨ ಕಾಲದಲ್ಲಿ ಪ್ರಮುಖ ಸೈನ್ಯಾಧಿಕಾರಿಯಾಗಿದ್ದನು. ಇವನು ತುಂಬಾ ಧೈರ್ಯಶಾಲಿ ಹಾಗೂ ಎಷ್ಟೋ ಯುದ್ಧಗಳನ್ನು ಗೆದ್ದವನಾಗಿದ್ದನು. ೧೬೫೯ ರಲ್ಲಿ ಬಿಜಾಪುರ ಸಾಮ್ರಾಜ್ಯವು, ಮುಘಲ್ ಹಾಗೂ ಮರಾಠರ ಆಕ್ರಮಣಕ್ಕೆ ಸಿಕ್ಕು ಕುಸಿಯತೊಡಗಿತು. ಆಗ ೨ನೆ ಅಲಿ ಆದಿಲ್ ಶಾಹ್ ನ ಅಪ್ಪಣೆಯಂತೆ ಆಫ್ಜಲ್ ಖಾನನು ಮರಾಠ ಸಾಮ್ರಾಠನದ ಶಿವಾಜಿಯನ್ನು ಎದುರಿಸಲು ಪ್ರತಾಪಘಡಗೆ ಹೋಗುವ ನಿರ್ಧಾರ ಮಾಡಿದನು. ಆಫ್ಜಲ್ ಖಾನನು ಜ್ಯೋತಿಷ್ಯದಲ್ಲಿ ಅಪಾರವಾದ ನಂಬಿಕೆಯನ್ನಿಟ್ಟಿದ್ದರಿಂದ, ಯಾವುದೇ ಯುದ್ಧಕ್ಕೆ ಹೋಗುವ ಮೊದಲು ಜ್ಯೋತಿಷಿಯ ಹತ್ತಿರ ಹೋಗಿ ಭವಿಷ್ಯವನ್ನು ಕೇಳುವದು ಅವನ ರೂಢಿಯಾಗಿತ್ತು. ಅದರಂತೆ ಈ ಸಲವೂ ಹೋಗಿ ಕೇಳಿದನು. ಜ್ಯೋತಿಷಿಯು ಈ ಬಾರಿ ಯುದ್ಧದಲ್ಲಿ ಸೋತು ಮಡಿಯುವದಾಗಿ ತಿಳಿಸಿ ಯುದ್ಧಕ್ಕೆ ಹೋಗದಿರಲು ಸೂಚಿಸಿದನು. ಆದರೆ ಆಫ್ಜಲ್ ಖಾನನು ಈಗಾಗಲೇ ಸುಲ್ತಾನರಿಗೆ ಮಾತು ಕೊಟ್ಟಿದ್ದರಿಂದ ಹೋಗದೆ ಇರುವದು ಸಾಧ್ಯವಿರಲಿಲ್ಲ.
ಅವನಿಗೆ ಈಗ ಒಂದು ದೊಡ್ಡ ಚಿಂತೆ ಎಂದರೆ ತನ್ನ ಮರಣದ ನಂತರ ತನ್ನ ಅರವತ್ನಾಲ್ಕು ಮಡದಿಯರು ಬೇರೆ ಮದುವೆ ಮಾಡಿಕೊಳ್ಳಬಹುದು. ಇದು ಅವನಿಗೆ ಸುತಾರಾಂ ಒಪ್ಪಿಗೆ ಇರಲಿಲ್ಲ. ಅದಕ್ಕಾಗಿ ಅವನು ಅವರೆಲ್ಲರನ್ನು ಯುದ್ಧಕ್ಕೆ ಹೋಗುವ ಮೊದಲು ಕೊಲ್ಲುವದಾಗಿ ನಿರ್ಧರಿಸಿಕೊಂಡನು. ಬಿಜಾಪುರದಿಂದ ಸುಮಾರು ೫ ಕಿ ಮೀ ದೂರದಲ್ಲಿರುವ ನವರಸಪುರ ಎಂಬ ಸ್ಥಳಕ್ಕೆ ತನ್ನ ಮಡದಿಯರನ್ನು ಒಬ್ಬೊಬ್ಬರನ್ನಾಗಿ ಕರೆದುಕೊಂಡು ಹೋಗಿ ಅಲ್ಲಿರುವ ಆಳವಾದ ಬಾವಿಗೆ ನೂಕಿ ಕೊಲ್ಲತೊಡಗಿದನು. ಹೋದವರು ಮರಳಿ ಬಾರದಿದ್ದನ್ನು ನೋಡಿ ಒಬ್ಬ ಹೆಂಡತಿಗೆ ಸಂದೇಹ ಬಂದು ಅವಳು ತಪ್ಪಿಸಿಕೊಂಡು ಓಡಿಹೋದಳೆಂದೂ, ಅವಳು ಯಾವುದೊ ಊರಿನಲ್ಲಿ ಸಿಕ್ಕಿ ಅಲ್ಲೇ ಅವಳನ್ನು ಕೊಂದು, ಸಮಾಧಿ ಮಾಡಿದನೆಂದು ಪ್ರತೀತಿ ಇದೆ. ಉಳಿದವರ ಗೋರಿಗಳು ಆ ಬಾವಿಗೆ ಹತ್ತಿಕೊಂಡೆ ಇವೆ. ಇಲ್ಲಿ ಒಂದು ಗೋರಿ ಮಾತ್ರ ಖಾಲಿ ಇದೆ.
ಇದಾದಮೇಲೆ ಆಫ್ಜಲ್ ಖಾನ್ ಯುದ್ಧಕ್ಕೆ ಹೋಗುತ್ತಾನೆ. ೧೬೫೯ ನವೆಂಬರ್ ೧೦ರಂದು ಶಿವಾಜಿಯಿಂದ ಹತನಾಗುತ್ತಾನೆ.
ಇದೆ ಈ ಅರವತ್ತಮೂರು ಗೋರಿಗಳ ದಾರುಣ ಕತೆ. ಈ ಕತೆಯನ್ನು ನಾನು ನನ್ನ ಒಬ್ಬ ಸಹೋದ್ಯೋಗಿಗೆ ಹೇಳಿದಾಗ, ಅವಳ ಪ್ರಶ್ನೆ ಆಫ್ಜಲ್ ಖಾನ್ ಸತ್ತಾಗ ಅವನ ವಯಸ್ಸೆಷ್ಟಿರಬಹುದು? ಮತ್ತು ಅವನು ೬೪ ಮದುವೆ ಮಾಡಿಕೊಂಡಿದ್ದಾದರೆ ಒಂದೇ ಬಾರಿಯಂತೂ ಇಷ್ಟೊಂದು ಮದುವೆ ಆಗಿರಲಿಕ್ಕಿಲ್ಲ, ಬಹುಶ ಈ ೬೪ ಹೆಂಡತಿಯರಲ್ಲಿ ಮದುವೆ ಮಾಡಿಕೊಂಡು ಒಂದು ವರ್ಷದಲ್ಲೇ ಅಥವಾ ಅದಕ್ಕೂ ಕಡಿಮೆ ಸಮಯದಲ್ಲೇ ಒಬ್ಬ ಹೆಂಡತಿಯಾದರು ಈ ದಾರುಣ ಹತ್ಯಾಕಾಂಡದಲ್ಲಿ ಬಲಿಯಾಗಿರಬಹುದು ಎಂದರು.... ನಿಜವಾಗಲೂ ಎಷ್ಟೊಂದು ಘೋರ! ಎನಿಸಿದ್ದು ಆ ಸಮಯದಲ್ಲಿ... :(
ಅಂತೂ ಸಾಠ ಕಬರ್ ನೋಡಿ ನಾನು ಸಿದ್ದಿ, ಬಾರಹ ಕಮಾನ್ ಕಡೆ ನಡೆದೆವು. ಮನಸ್ಸು ಮಾತ್ರ ಆ ಘೋರ ಹತ್ಯಾಖಾಂಡದ ಕತೆಯನ್ನೇ ಮೆಲುಕು ಹಾಕುತ್ತಿತ್ತು....
.........
Wow!!! Its very nice... I'm so thrilled..!!!
ReplyDelete