Dec 14, 2019

ಕಡಲತೀರಕ್ಕೆ ನನ್ನ ಮೊದಲ ಭೇಟಿ

ಜೂಲೈ ೨೮, ೨೦೧೯

ಬೆಂಗಳೂರಿಂದ ವೈಯಕ್ತಿಕ ಕೆಲಸಕ್ಕಾಗಿ ಧಾರವಾಡಕ್ಕೆ ಹೋಗಬೇಕಾಗಿ ಬಂತು. ನಾನು ಸಿದ್ದಿ ಮೂರ್ನಾಲ್ಕು ದಿನಕ್ಕೆ ಆಗುವಷ್ಟು ಬಟ್ಟೆ ಪ್ಯಾಕ್ ಮಾಡಿಕೊಂಡು ನಡೆದೆವು. ಸಿದ್ದಿ ಇದೆ ನಡುವೆ ನನಗೆ ಸರ್ಪ್ರೈಸ್ ಮಾಡಲು ಧಾರವಾಡದಿಂದ ಗೋಕರ್ಣ ಪ್ರವಾಸ ಪ್ಲಾನ್ ಮಾಡಿಕೊಂಡಿದ್ದರು. ಕಾರಣ ನಾನು ಈ ಮೊದಲು ಸಮುದ್ರ ದಂಡೆ ಅಥವಾ ಬೀಚ್ ನೋಡಿದ್ದೇ ಇಲ್ಲ. ಧಾರವಾಡಕ್ಕೆ ಹೋದಮೇಲೆ ನನಗೆ ತಮ್ಮ ಗೋಕರ್ಣ ಪ್ರವಾಸದ ಪ್ಲಾನ್ ತಿಳಿಸಿದರು. ಸಂತೋಷ ಏನೋ ಆಯಿತು ಆದ್ರೆ ಬೇಜಾರು ಕೂಡ ಆಯಿತು. ಮೊದ್ಲೇ ನನಗೆ ಈ ರೀತಿ ಗೋಕರ್ಣಕ್ಕೆ ಹೋಗೋದಿದೆ ಅಂತ ಹೇಳಿದ್ದರೆ ನಾನು ಬೀಚ್ ನಲ್ಲಿ ಆಡಲು ಅನುಕೂಲವಾಗುವಂತಹ ಬಟ್ಟೇನಾದ್ರು ತೆಗೆದುಕೊಳ್ಳಬಹುದಿತ್ತು. ಹೋಗಲಿ ಬಿಡು ಎಂದು ನಾವು ಮಾರನೇ ದಿನ ಮುಂಜಾನೆ ೫ ಗಂಟೆಗೆಲ್ಲ ಧಾರವಾಡದಿಂದ ಪ್ರಯಾಣ ಶುರು ಮಾಡಿದೆವು.

ಗೋಕರ್ಣಕ್ಕೆ ಹೋಗುವ ದಾರಿ ಕೂಡ ನನಗೆ ಹೊಸದೇ. ಆ ಕಾಡು, ಆ ಝರಿಗಳು, ಆ ಗುಡ್ಡಗಳು ನೋಡುವದೇ ಒಂದು ಹಬ್ಬ. ನಾವು ಮಳೆಗಾಲದಲ್ಲಿ ಹೊರಟಿದ್ದರಿಂದ ಮಳೆ ನಿಂತು ನಿಂತು ಹಣಿಯುತ್ತಿತ್ತು. ಅಲ್ಲಲ್ಲಿ ಗುಡ್ಡದ ನಡುವಿಂದ ಸಣ್ಣ-ದೊಡ್ಡ ಝರಿಗಳು ಹರಿಯುವದನ್ನು ನಾವು ನೋಡಬಹುದಿತ್ತು. ಮತ್ತು ಮಳೆ ಹನಿಗಳ ಸತತ ಸ್ಪರ್ಶದಿಂದಾಗಿ ಮರಗಳು ಹಚ್ಚ ಹಸಿರಾಗಿ ನಗುತ್ತಿದ್ದವು. ಬಿಳಿ ಮೋಡಗಳು ಬೆಟ್ಟದ ತುದಿಗಳನ್ನು ಆವರಿಸಿದ್ದವು. ಈ ಪ್ರವಾಸದಲ್ಲಿ ನಮ್ಮೊಡನೆ ಕುಸುಮ ಅಮ್ಮ, ಮೋಹನ್ ಅಂಕಲ್, ಶಿವು, ಭುವನ ಕೂಡ ಜೊತೆಗಿದ್ದರು. ಕುಸುಮ ಅಮ್ಮ ಕೆಲವು ಸಸ್ಯಗಳನ್ನು ತೋರಿಸಿ ಅವನ್ನು ಯಾವುದಕ್ಕೆ ಮತ್ತು ಹೇಗೆ ಉಪಯೋಗಿಸುತ್ತಾರೆ ಅಂತ ಹೇಳುತ್ತಿದ್ದರು. ನಡು-ನಡುವೆ ಮೋಹನ್ ಅಂಕಲ್ ರ  ಟಿಪ್ಪಣಿಗಳು ಸೇರಿಕೊಳ್ಳುತ್ತಿದ್ದವು. ಪ್ರವಾಸದ ದಾರಿ ತುಂಬಾ ಹೊಸದು ಮತ್ತು ಆಕರ್ಷಕವಾದ್ದರಿಂದ ಬೆಳಿಗ್ಗೆ ಬೇಗ ಎದ್ದಿದ್ದರೂ ಯಾರು ಗಾಡಿಯಲ್ಲಿ ಮಲಗಲಿಲ್ಲ.
ಗೋಕರ್ಣವು ಪಶ್ಚಿಮ ಘಟ್ಟದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿರುವ ಒಂದು ಊರು. ಇದು ಅರಬ್ಬೀ ಸಮುದ್ರ ದಂಡೆಯಲ್ಲಿದೆ. ಧಾರವಾಡದಿಂದ ಸುಮಾರು ೧೫೩ ಕಿ. ಮೀ. ದೂರದಲ್ಲಿದೆ. ಗೋಕರ್ಣವು ಇಲ್ಲಿರುವ ಹಿಂದೂ ಪುಣ್ಯಕ್ಷೇತ್ರವಾದ ಮಹಾಬಲೇಶ್ವರ ದೇವಸ್ಥಾನಕ್ಕೆ ಪ್ರಸಿದ್ದಿ ಪಡೆದಿದೆ.
ನಮ್ಮ ಪ್ರಯಾಣ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯ ಮೂಲಕ ಗೋಕರ್ಣದತ್ತ ಸಾಗಿತು. ಈ ಹೆದ್ದಾರಿಯಲ್ಲಿ ಮಾಸ್ತಿಕಟ್ಟೆ ಎಂಬ ಊರು ಸಿಗುವದು. ಹೆದ್ದಾರಿ ಪಕ್ಕದಲ್ಲೇ ಗುರು ನಿತ್ಯಾನಂದ ಸ್ವಾಮಿ ಮಂದಿರವಿದೆ. ಮಂದಿರದ ಮೇಲೆ ಒಂದು ದೊಡ್ಡ ಗಡಿಯಾರವಿದೆ(ಕ್ಲಾಕ್ ಟವರ್). ದೇವಸ್ಥಾನ ಅಷ್ಟೇನು ಹಳೆಯದಲ್ಲವಾದರೂ ನೋಡಲು ಸುಂದರವಾಗಿದೆ. ದೇವಸ್ಥಾನದ ಎದುರಿಗೆ ಬಂದ ಭಕ್ತಾದಿಗಳಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಮಾಡಲಾಗಿದೆ.

ಗುರು ನಿತ್ಯಾನಂದ ಸ್ವಾಮಿ ದೇವಾಲಯದ ಪಕ್ಕದಲ್ಲೇ ಚಿಕ್ಕ ಮಹಾಸತಿ ದೇವಾಲಯ ಕೂಡ ಇದೆ. ಮಂದಿರದ ಪ್ರವೇಶ ದ್ವಾರದ ಎರಡು ಬದಿಯಲ್ಲಿ ಸುಂದರವಾದ ಚಿತ್ರಕಲೆಗಳಿವೆ.
ಈ ಎರಡು ದೇವಸ್ಥಾನಗಳನ್ನು ನೋಡಿಕೊಂಡು ನಾವು ಮತ್ತೆ ಗೋಕರ್ಣದತ್ತ ಪ್ರಯಾಣ ಬೆಳೆಸಿದೆವು. ಮಳೆಯೂ ಕೂಡ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಶುರುವಾಯಿತು.
ಅಲ್ಲಿಂದ ನೇರವಾಗಿ ಅಂಕೋಲದತ್ತ ನಡೆದೆವು. ಅಂಕೋಲದ ಹತ್ತಿರವಿರುವ ಹನುಮಟ್ಟದಲ್ಲಿರುವ ಲಕ್ಷ್ಮೀನಾರಾಯಣ ಮಹಾಮಾಯ ದೇವಸ್ಥಾನ ನೋಡಿಕೊಂಡು ಮುಂದೆ ಹೋಗುವದೆಂದು ನಿರ್ಧರಿಸಲಾಗಿತ್ತು.
ಕ್ರಿ.ಶ 1510 ರಲ್ಲಿ ಗೋವಾದಿಂದ ಪಲಾಯನ ಮಾಡಿದ ಜಿಎಸ್ಬಿ ಬ್ರಾಹ್ಮಣರು ತಮ್ಮ ಕುಟುಂಬ ದೇವತೆಗಳೊಂದಿಗೆ (ಕುಲದೇವತಾ ವಿಗ್ರಹಗಳು) ಬಂದು ಇಲ್ಲಿ ನೆಲೆಸಿದರು. ಈ ದೇವಾಲಯದಲ್ಲಿನ ಚಿನ್ನದ ವಿಗ್ರಹವನ್ನು ಹತ್ತು-ಹದಿನೈದು ವರ್ಷಗಳಿಗೊಮ್ಮೆ ಪೂಜೆಗೆ ತೆಗೆದುಕೊಳ್ಳಲಾಗುತ್ತದೆ. ದೇವಾಲಯದ ಪುನರಪ್ರಸ್ಥಾಪನ 1975 ರಲ್ಲಿ ನಡೆಯಿತು. ಲಕ್ಷ್ಮೀನಾರಾಯಣ ಗುಡಿಯು ವಿಶಾಲವಾದ ಜಾಗದಲ್ಲೇ ನಿರ್ಮಿಸಲಾಗಿದೆ. ಸುತ್ತಲೂ ಕಾಂಪೋಂಡ್ ಇದೆ. ಈ ದೇವಸ್ಥಾನಕ್ಕೆ ಹೋಗಲು ಎರಡು ದಾರಿಗಳಿವೆ. ದೇವಸ್ಥಾನದ ಪ್ರವೇಶ ದ್ವಾರದ ಗೋಡೆಯ ಮೇಲೆ ಒಂದು ಕಡೆ ಸೂರ್ಯ ಮತ್ತೊಂದು ಕಡೆ ಚಂದ್ರನನ್ನು ಮಾಡಲಾಗಿದೆ. ಅಲ್ಲದೆ ಇಬ್ಬರು ದ್ವಾರಪಾಲಕರ ಚಿತ್ರವನ್ನು ಬರೆಯಲಾಗಿದೆ.
ಪ್ರವೇಶ ದ್ವಾರದ ಒಳಗೆ ಹೋಗುತ್ತಿದ್ದಂತೆ ನಟ್ಟ ನಡುವೆ ದೇವಸ್ಥಾನ ಸುತ್ತಲೂ ಅರ್ಚಕರು ಇರಲು ವಸತಿಗಳು, ಬಾವಿ, ತುಳಸೀಕಟ್ಟೆಗಳು ತುಂಬಾ ಆಕರ್ಷಕವಾಗಿದ್ದವು. ಒಂದುರೀತಿಯಲ್ಲಿ ಇದು ಅಗ್ರಹಾರದಂತೆ ಕಾಣುತ್ತಿತ್ತು. ದೇವಸ್ಥಾನದ ಹೊರಗೆ ಸುತ್ತಲೂ ಕಲ್ಲುಗಳನ್ನು(ಟೈಲ್ಸ್) ಹಾಕಿದ್ದರಿಂದ ಮಳೆಬಂದು ಕಾಲು ಜಾರುತ್ತಿದ್ದವು.
ದೇವಾಲಯವು ಮುಖಮಂಟಪ, ಸಭಾಮಂಟಪ ಮತ್ತು ಗರ್ಭಗುಡಿಗಳನ್ನು ಹೊಂದಿದೆ.
ದೇವಸ್ಥಾನದ ಮೇಲ್ಭಾಗವು ತುಂಬಾ ಆಕರ್ಷಕವಾಗಿದ್ದು ಪ್ರತಿಯೊಂದು ಮೂಲೆಯ ಕೊನೆಗೆ ಹಾವಿನ ಹೆಡೆಗಳನ್ನು ಮಾಡಲಾಗಿದೆ. ಗರ್ಭಗುಡಿಯಲ್ಲಿ ಲಕ್ಷ್ಮೀನಾರಾಯಣರ ಮೂರ್ತಿಯಿದೆ.
ಈ ದೇವಾಲಯ ಇಲ್ಲಿ ಹೇಗೆ ನಿರ್ಮಿಸಲಾಯಿತು ಎನ್ನುವದಕ್ಕೂ ಒಂದು ಐತಿಹಾಸಿಕ ಕಥೆ ಇದೆ. ನಮಗೆಲ್ಲ ತಿಳಿದಿರುವಂತೆ, ಗೋವಾ ಪೋರ್ಚುಗೀಸ್ ಆಳ್ವಿಕೆಯಲ್ಲಿ ಸ್ವಲ್ಪ ಕಾಲ ಇತ್ತು. ಪೋರ್ಚುಗೀಸ್ ಹಿಂದೂ ದೇವಾಲಯಗಳನ್ನು ಮತ್ತು ಹಿಂದೂ ಧರ್ಮವನ್ನು ನಾಶಮಾಡಲು ಪ್ರಾರಂಭಿಸಿದರು. ಈ ಧಾರ್ಮಿಕ ಕಿರುಕುಳವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಅನೇಕ ಹಿಂದೂ ಕುಟುಂಬಗಳು ಗೋವಾದಿಂದ ವಲಸೆ ಹೋದವು. ಶ್ರೀ ಲಕ್ಷ್ಮೀನಾರಾಯಣ ಮಹಾಮಾಯನ ಭಕ್ತರು ಸಹ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು, ಆದರೆ ಅವರು ತಮ್ಮ ಕುಟುಂಬದ ದಿನಚರಿಯನ್ನು ಬಿಡಲು ಸಿದ್ಧರಿರಲಿಲ್ಲ. ನಾಗ್ವೆಯ ಶ್ರೀ ಲಕ್ಷ್ಮೀನಾರಾಯಣ ಅವರನ್ನು ತಮ್ಮೊಂದಿಗೆ ಕರೆದೊಯ್ಯುವುದು ಅವರಿಗೆ ಸುಲಭವಾಗಿತ್ತು, ಆದರೆ ಮಹಾಮಾಯರು ರೋಹಿಣಿಯ ರೂಪದಲ್ಲಿ ಸ್ವ-ಅಭಿವ್ಯಕ್ತಿ ಹೊಂದಿದ್ದರು, ಇದು ಅವರನ್ನು ಗೋವಾದಿಂದ ಹೊರಗೆ ಕರೆದೊಯ್ಯುವಲ್ಲಿ ಭಕ್ತರಿಗೆ ಸಮಸ್ಯೆಯನ್ನು ತಂದೊಡ್ಡಿತು. ಆದರೆ, ಮಹಾಮಾಯ ಅವರು ತೆಂಗಿನಕಾಯಿ ರೂಪದಲ್ಲಿ ಅವರೊಂದಿಗೆ ಹೋಗುವುದಾಗಿ ಭರವಸೆ ನೀಡಿದರು. ಹೀಗೆ ಭಕ್ತರು 1510 ರಲ್ಲಿ ತೆಂಗಿನಕಾಯಿ ಮತ್ತು ಶ್ರೀ ಲಕ್ಷ್ಮೀನಾರಾಯಣನ ಚಿತ್ರದೊಂದಿಗೆ ಗೋವಾದಿಂದ ಹೊರಟರು.
ಆಗ ಹನುಮತ್ತ ದಟ್ಟ ಕಾಡು. ಭಕ್ತರು ಹನುಮತ್ತ ತಲುಪುತ್ತಿದ್ದಂತೆ ಮುಸ್ಸಂಜೆಯಾಯಿತು. ಅವರು ಶ್ರೀ ಮಹಿಷಾಸುರ ಮರ್ದಿನಿ ಶ್ರೀ ಭಾಗವತಿಯ ದೇವಸ್ಥಾನದಲ್ಲಿ ರಾತ್ರಿ ಕಳೆಯುವದಾಗಿ ಯೋಚಿಸಿ ಅಲ್ಲೇ ತಂಗಿದರು. ಆ ಸ್ಥಳದಲ್ಲಿ ಶ್ರೀ ವೀರಪ್ಪ, ಶ್ರೀ ಹೊನ್ನಪ್ಪ ಮತ್ತು ಶ್ರೀ ಹನುಮಂತ ದೇವಾಲಯಗಳೂ ಇದ್ದವು. ಈ ಸ್ಥಳವನ್ನು ಹನುಮತ್ತ ಎಂದು ಕರೆಯಲು ಕಾರಣ ಇಲ್ಲಿನ ಹನುಮಂತ ದೇವಾಲಯ. ಮಾರನೆಯ ದಿನ ಬೆಳಿಗ್ಗೆ, ಒಂದು ಮಹತ್ವದ ಘಟನೆ ನಡೆಯಿತು. ತೆಂಗಿನಕಾಯಿ ಈಗ ಇರುವೆ ಬೆಟ್ಟದಿಂದ ಆವೃತವಾಗಿತ್ತು. ಶ್ರೀ ಲಕ್ಷ್ಮೀನಾರಾಯಣ ಮತ್ತು ಶ್ರೀ ಮಹಾಮಾಯರು ಅಲ್ಲಿ ನಿರಂತರವಾಗಿ ಇರಲು ಬಯಸಿದ್ದರು ಎಂಬುದು ಸ್ಪಷ್ಟವಾಗಿತ್ತು ಆದ್ದರಿಂದ ಅಲ್ಲಿಯೇ ನೆಲೆನಿಂತರೆಂದು ಪ್ರತೀತಿ.
ದೇವಾಲಯದ ಹಿಂಭಾಗದ ನೋಟ.
ಲಕ್ಷ್ಮೀನಾರಾಯಣ ದೇವಸ್ಥಾನ ನೋಡಿದ ನಂತರ ನಾವು ಗೋಕರ್ಣದತ್ತ ನಡೆದೆವು. ಗೋಕರ್ಣ ತಲುಪಿದ ನಂತರ ಮಹಾಗಣಪತಿಯ ದರ್ಶನ ಪಡೆದು ಮಹಾಬಲೇಶ್ವರ ದೇವರ ದರ್ಶನಕ್ಕೆ ನಡೆದೆವು. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ದೇವಸ್ಥಾನದ ಒಳ ಹೋಗಲು ಸರದಿಯಲ್ಲಿ ನಿಲ್ಲಬೇಕಾಗಿತ್ತು. ಅಷ್ಟೊಂದು ಗುಡಿ ಭಕ್ತರಿಂದ ಕಿಕ್ಕಿರಿದಿತ್ತು. ಅಲ್ಲಿ ಫೋಟೋ ತೆಗೆಯೋದು ನಿಷೇದಿಸಲಾಗಿತ್ತಾದ್ದರಿಂದ ಯಾವ ಫೋಟೋ ಕೂಡ ತೆಗೆಯಲಿಲ್ಲ. ನಮ್ಮ ಸರದಿ ಬಂದ ತಕ್ಷಣ ಒಳಗೆ ಹೋಗಿ ದೇವರಿಗೆ ನಮಸ್ಕಾರ ಮಾಡಿ, ಭೂಮಿಯಲ್ಲಿ ಅರ್ಧ ಹುಗಿದು ಹೋದ ಆತ್ಮಲಿಂಗವನ್ನು ಕೈ ಹಾಕಿ ಸ್ಪರ್ಶಿಸಲು ಅರ್ಚಕರು ಹೇಳಿದರು. ಭಕ್ತರು ತುಂಬಾ ಜನ ಇದ್ದಿದ್ದರಿಂದ ಬೇಗಬೇಗನೆ ನಮಸ್ಕಾರ ಮಾಡಿ ಮುಂದೆ ಹೋಗುವಂತೆ ಹೇಳುತ್ತಿದ್ದರು. ಅಂತೂ ದರ್ಶನ ಮಾಡಿಕೊಂಡು ತೀರ್ಥ ತೆಗೆದುಕೊಂಡು, ಸಮುದ್ರ ದಂಡೆಯತ್ತ ನಡೆದೆವು. ಅರ್ಧ ದಾರಿ ಹೋದ ನಂತರ ಅಲ್ಲಿ ನಿಂತ ಪಂಡಿತರೊಬ್ಬರು ಪ್ರಸಾದ ಕೊಡುತ್ತಿದ್ದಾರೆ ಊಟ ಮಾಡಿಕೊಂಡು ಹೋಗಿ ಎಂದರು. ಊಟ ಬ್ರಾಹ್ಮಣ ಸಂಪ್ರದಾಯದಂತೆ ಮೊದಲು ಶಿರಾ, ನಂತರ ಅನ್ನ-ಸಾರು ಆಮೇಲೆ ಅನ್ನ-ಸಾಂಬಾರು, ಕೊನೆಯಲ್ಲಿ ಅನ್ನ- ಮಜ್ಜಿಗೆ. ಏನೇ ಹೇಳಿ ಪ್ರಸಾದದ ಹೆಸರಿನಲ್ಲಿ ಏನೇ ತಿಂದರು ಅಮೃತ. ನಮಗಂತೂ ಹೊಟ್ಟೆ ತುಂಬಾ ಊಟ ಆಯಿತು. ನಂತರ ಬೀಚ್ ಗೆ ಹೋದೆವು.
ಗೋಕರ್ಣ ಎಂಬ ಹೆಸರಿನ ಇತಿಹಾಸವೆಂದರೆ, ಗೋ ಎಂದರೆ -  ಹಸು/ಆಕಳು, ಕರ್ಣ ಎಂದರೆ - ಕಿವಿ ಎಂದರ್ಥ. ಈ ಪುಣ್ಯಕ್ಷೇತ್ರವು ಗಂಗಾವಳಿ ಮತ್ತು ಅಜ್ಞಶಿನಿ ಎಂಬ ಎರಡು ನದಿಗಳ ನಡುವೆ ಹಸುವಿನ ಕಿವಿಯಾಕಾರದ ಪ್ರದೇಶವಾಗಿದೆ. ಆದ್ದರಿಂದ ಗೋಕರ್ಣ ಎಂಬ ಹೆಸರು ಬಂತು ಎಂದು ಹೇಳುತ್ತಾರೆ, ಅಲ್ಲದೆ ಇಲ್ಲಿ ಹಸುವಿನ ಕಿವಿಯಿಂದ ಶಿವ ಹೊರಹೊಮ್ಮಿದ ಕಾರಣಕ್ಕೂ ಈ ಹೆಸರು ಬಂತೆಂದು ಹೇಳುತ್ತಾರೆ.
ಪೌರಾಣಿಕ ಕತೆಗಳಲ್ಲಿ ನನಗೆ ಎಲ್ಲಿಲ್ಲದ ಆಸಕ್ತಿ, ಚಿಕ್ಕವಳಿದ್ದಾಗಿಂದನು ನನಗೆ ನನ್ನ ಅಪ್ಪಾಜಿಯೊಂದಿಗೆ ಕಾಲ ಕಳೆಯುವದೆಂದರೆ ತುಂಬಾ ಇಷ್ಟ. ಅಪ್ಪಾಜಿ ಪೂಜೆ, ಪುರಾಣದಲ್ಲೆಲ್ಲ ಆಸಕ್ತಿ ಹೊಂದಿದವರಾದ್ದರಿಂದ ಬಿಡುವಿದ್ದಾಗಲೆಲ್ಲ ನಾನು ಹಬ್ಬಗಳ ಕುರಿತು, ಪೂಜೆಗಳ ಕುರಿತು ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವರು, ಮತ್ತು ಅದಕ್ಕೆ ಸಂಬಂಧಿಸಿದಂತೆ ಕಥೆಗಳನ್ನು ಸಹ ಹೇಳುವರು. ಶಿವ ಪಾರ್ವತೀ ಕಲ್ಯಾಣ, ಗಣೇಶ ಚಂದ್ರನಿಗೆ ಶಾಪ ಕೊಟ್ಟ ಕಥೆ, ಕುಬೇರನ ಗರ್ವ ಭಂಗ, ಜೋಕುಮಾರನ ಕಥೆ, ಪಾರ್ವತೀ ಅಗ್ನಿಪ್ರವೇಶ ಮಾಡಿದ ಕಥೆ, ಕೃಷ್ಣ ಜಾಂಬುವಂತ ಕದನ ಹಾಗೆ ರಾವಣ ಶಿವನಿಂದ ಪಡೆದ ಆತ್ಮಲಿಂಗವನ್ನು ಗಣೇಶ ಉಪಾಯದಿಂದ ಮರಳಿ ಪಡೆದ ಕಥೆ ಮುಂತಾದವುಗಳನ್ನು ಅಪ್ಪಾಜಿ ನನಗೆ ಹೇಳಿದ್ದರು. ಈಗ ಇದೆಲ್ಲ ಯಾರು ಕೇಳುತ್ತಾರೆ. ಚಲನಚಿತ್ರದಲ್ಲಿ ಬರುವ ಕಥೆಯೇ ನಿಜ ಎಂದು ನಂಬಿ ಬದುಕೋ ಕಾಲ ಇದು.
ಅದೇನೇ ಇರಲಿ, ಗೋಕರ್ಣಕ್ಕೂ ಕೂಡ ಒಂದು ಪೌರಾಣಿಕ ಕಥೆಯಿದೆ.

"ಒಂದು ಬಾರಿ ಲಂಕೇಶ್ವರ ರಾವಣ ಶಿವನನ್ನು ಕುರಿತು ಘೋರ ತಪಸ್ಸನ್ನಾಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗುತ್ತಾನೆ. ವರವನ್ನು ಕೇಳು ಎಂದಾಗ ರಾವಣ ಶಿವನ ಆತ್ಮಲಿಂಗವನ್ನೇ ಕೇಳುತ್ತಾನೆ. ಆತ್ಮಲಿಂಗ ತನ್ನ ಜೊತೆ ಇದ್ದರೆ ಯಾರು ತನ್ನನ್ನು ಏನು ಮಾಡಲಾರರು, ಸ್ವತಃ ಶಿವ ಕೂಡ ಏನು ಮಾಡಲಾರ ಎಂದು ಅವನಿಗೆ ತಿಳಿದಿರುತ್ತದೆ. ಶಿವ ಇಲ್ಲ ಎನ್ನಲಾಗದೆ ಭಕ್ತನಿಗೆ ತನ್ನ ಆತ್ಮಲಿಂಗವನ್ನು ವರವಾಗಿ ಕೊಡುತ್ತಾನೆ ಜೊತೆಗೆ ರಾವಣನಿಗೆ ಹೇಳುತ್ತಾನೆ ಈ ಆತ್ಮಲಿಂಗವನ್ನು ಮನೆ ಮುಟ್ಟುವವರೆಗೂ ಎಲ್ಲೂ ಕೆಳಗೆ ಇಡಕೂಡದು ಎಂದು. ಇದನ್ನು ನೋಡಿದ ದೇವತೆಗಳು ನಡುಗಿ ಹೋಗುತ್ತಾರೆ. ರಾಕ್ಷಸನಾದ ರಾವಣ ತಮ್ಮನ್ನು ಇನ್ನು ಉಳಿಸಲಾರನೆಂದು ತಿಳಿದು ಶಿವನಲ್ಲಿ ಮೊರೆ ಹೋಗುತ್ತಾರೆ. ಆಗ ಶಿವ ನನ್ನಿಂದ ಏನನ್ನು ಮಾಡಲಾಗುವದಿಲ್ಲ, ನೀವು ಗಣೇಶನನ್ನೇ ಕೇಳುವದು ಉಚಿತ ಎಂದು ಸೂಚಿಸುತ್ತಾನೆ. ದೇವತೆಗಳು ಗಣೇಶನಿಗೆ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ. ಗಣೇಶ ಆಯಿತು ಎಂದು ಬಾಲ ಬ್ರಾಹ್ಮಣನಾಗಿ ರಾವಣನ ಎದಿರು ಬರುತ್ತಾನೆ. ಆ ವೇಳೆಗೆ ರಾವಣ ಈತನನ್ನು ಕಂಡು ನೋಡು ಬಾಲ ಬ್ರಾಹ್ಮಣ ನನಗೆ ತುರ್ತಾಗಿ ಲಘುಶಂಕೆ ಹೋಗುವದಿದೆ, ನೀನು ಈ ಶಿವಲಿಂಗವನ್ನು ಹಿಡಿದುಕೊಂಡಿರು,ಯಾವುದೇ ಕಾರಣಕ್ಕೂ ಕೆಳಗಿಡಬೇಡ ನಾನು ತ್ವರಿತವಾಗಿ ಹಿಂದಿರುಗುತ್ತೇನೆ ಎಂದು ಹೇಳುತ್ತಾನೆ. ಗಣೇಶ ಆಗಲಿ ಎಂದು ಹಿಡಿದುಕೊಳ್ಳುತ್ತಾನೆ. ರಾವಣ ಲಘುಶಂಕೆಗೆ ಹೋದ ತಕ್ಷಣ ಗಣೇಶ ನನಗೆ ಈ ಲಿಂಗ ತುಂಬಾ ಭಾರವಾಗುತ್ತಿದೆ, ನಾನು ಮೂರೆನಿಸುವಷ್ಟರಲ್ಲಿ ನೀನು ಬರದಿದ್ದರೆ ನಾನಿದನ್ನು ಕೆಳಗಿಡುತ್ತೇನೆ ಎಂದು ಕೂಗಿಕೊಳ್ಳುತ್ತಾನೆ. ರಾವಣ ಹಾಗೆ ಮಾಡಬೇಡ ಎನ್ನುತ್ತಿರುವಾಗಲೇ ಗಣೇಶ ಒಂದು - ಎರಡು - ಮೂರು ಎಂದು ಆತ್ಮಲಿಂಗವನ್ನು ಕೆಳಗಿಟ್ಟುಬಿಡುತ್ತಾನೆ. ರಾವಣ ಕೈ ತೊಳೆದು ಓಡಿ ಬರುವ ಹೊತ್ತಿಗೆ ಆತ್ಮಲಿಂಗ ಭೂಮಿಯಲ್ಲಿ ಅರ್ಧ ಹುಗಿದು ಹೋಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಲಿಂಗ ಮೇಲೆ ಬರುವದಿಲ್ಲ. ಅದೇ ಸ್ಥಳವೇ ಈಗಿನ ಪುಣ್ಯಕ್ಷೇತ್ರ ಗೋಕರ್ಣ ಎಂದು ಹೇಳಲಾಗುತ್ತದೆ."
ಆಗಲೇ ಮಳೆ ಸಣ್ಣಗೆ ಶುರುವಾಯ್ತು. ಬೀಚ್ ಮೊದಲ ಬಾರಿ ನೋಡಿ ತುಂಬಾ ಖುಷಿ ಆಯಿತು. ದೃಷ್ಠಿ ಹರಿದಷ್ಟು ದೂರ ಬರಿ ನೀರು, ತಂಪು ಗಾಳಿ, ಅಲೆಗಳು ಬಂದು ದಡಕ್ಕೆ ಅಪ್ಪಳಿಸುವ ಸದ್ದು. ನಾನು ಒಂದು ಪುಸ್ತಕದಲ್ಲಿ ಓದಿದ್ದೆ ಸಮುದ್ರದ ಪ್ರತಿ ಏಳನೇ ಅಲೆಯು ತುಂಬಾ ದೊಡ್ಡದಾಗಿರುತ್ತದೆ ಎಂದು. ನಾನು ಅಲೆಗಳನ್ನು ಎನಿಸ ತೊಡಗಿದೆ. ಕೆಲವು ಸಲ ಸರಿ ಬಂತು, ಕೆಲವು ಸಲ ಇಲ್ಲ. ಅಷ್ಟೋತ್ತಿಗೆ ಮಳೆ ಜೋರಾಗಿ ಬರಲು ಶುರು ಮಾಡಿತು. ಸ್ವಲ್ಪ ನೆರಳಲ್ಲಿ ನಿಂತು ಮಳೆ ನಿಂತ ಮೇಲೆ ಮತ್ತೆ ಬೀಚ್ ನತ್ತ ನಡೆದೆವು.
ತುಂಬಾ ಹೊತ್ತು ಬೀಚ್ ನಲ್ಲಿ ಆಟ ಆಡಲು ಮನಸ್ಸು ಬರಲಿಲ್ಲ. ಕಾರಣ ಹಾಕಿಕೊಂಡಿದ್ದ ಕಾಟನ್ ಬಟ್ಟೆ. ಚಳಿ ಹತ್ತಲು ಶುರುವಾಯ್ತು. ಆದರೆ ಶಿವೂ ಮತ್ತು ಭುವನ ಇದೆಲ್ಲದರ ಪರಿವೆ ಇಲ್ಲದೆ ನೀರಲ್ಲಿ ಆಟವಾಡಿದರು.
ಸಮುದ್ರದ ಅಲೆಗಳು ಅದೇನೋ ಕಪ್ಪು ಮಣ್ಣನ್ನು ತಂದು ದಡಕ್ಕೆ ಹಾಕುತ್ತಿತ್ತು. ಬೀಚ್ ಅಷ್ಟೇನು ಗಲೀಜು ಅಲ್ಲ, ಅಷ್ಟು ಸ್ವಚ್ಛವೂ ಅಲ್ಲ ಹಂಗಿದೆ. ಅಲ್ಲಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಓಂ ಬೀಚ್ ಗೆ ಹೋದೆವು. ಬೆಟ್ಟ ಹತ್ತಿ ಇಳಿದರೆ ॐ ಆಕಾರದಲ್ಲಿ ಈ ಬೀಚ್ ಕಾಣುವದರಿಂದ ಇದಕ್ಕೆ ಓಂ ಬೀಚ್ ಎನ್ನುತ್ತಾರೆ. ಇಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು ಕೂಡ ಇವೆ. ಮಳೆಯೂ ಸಣ್ಣಗೆ ಬರ್ತಾನೆ ಇತ್ತು. ಹಂಗೆ ಕೊಡೆ ಹಿಡಿದುಕೊಂಡು ಬೀಚ್ ದಂಡೆಗುಂಟ ತಿರುಗಾಡಿ ಸ್ವಲ್ಪ ಕಪ್ಪೆ ಚಿಪ್ಪನು ಆರಿಸಿಕೊಂಡೆವು. ಇಲ್ಲಿ ಭುವನ ನೀರಲ್ಲಿ ಆಡೋವಾಗ ದೊಡ್ಡದೊಂದು ಅಲೆ ಬಂದು ಅವಳನ್ನು ಕೆಡವಿತು, ಅವಳು ಮತ್ತೆ ಎದ್ದು 'ಅಕ್ಕ ನನ್ನ ಚಪ್ಪಲಿ ಹೋದುವು' ಎಂದು ನನಗೆ ಹೇಳಿದಳು. ಆದರೆ ಸಮುದ್ರದ ನಂತರದ ಅಲೆಯೇ ಅವಳ ಚಪ್ಪಲಿಗಳನ್ನು ಮತ್ತೆ ತಂದು ದಂಡೆಗೆ ಹಾಕಿತ್ತು. ಅವಳಿಗೆ ತುಂಬಾ ಖುಷಿ ಆಯಿತು.
ಅಂತೂ ಬೀಚ್ ನೋಡಿದು ಸಮಾಧಾನವಾಯ್ತು. ನಾವು ಇನ್ನು ಬೆಳಗಿರ್ತೇ ಧಾರವಾಡ ತಲುಪಬೇಕಿತ್ತು ಅಂತ ಬೇಗನೆ ಗೋಕರ್ಣದಿಂದ ಹೊರಟೆವು. ಬರುತ್ತಾ ಕೂಡ ಒಂದು ದೇವಸ್ಥಾನ ನೋಡಬೇಕು ಎಂದು ಸಿದ್ದಿ , ಮೋಹನ್ ಅಂಕಲ್ ಗೆ ಹೇಳ್ತ ಇದ್ರು. ಅದೇ ಶ್ರೀ ಕ್ಷೇತ್ರ ಕೌಡಿಕೇರಿ ದೇವಸ್ಥಾನ. ಈ ದೇವಸ್ಥಾನ ಕೆರೆಯ ದಂಡೇ ಮೇಲಿದೆ. ಈ ಕೆರೆಯನ್ನು ಭೀಮನು ವನವಾಸದಲ್ಲಿದ್ದಾಗ ಸೃಷ್ಟಿ ಮಾಡಿದನೆಂದು ಹೇಳಲಾಗುತ್ತದೆ. ಅಲ್ಲಿಯೇ ದೇವಸ್ಥಾನದ ಎದುರಿಗೆ ಒಂದು ಭಾವಿ ಕೂಡ ಇದೆ. ಅಷ್ಟೇನು ದೊಡ್ಡದಲ್ಲದಿದ್ರೂ ದೇವಾಲಯ ಮಾತ್ರ ತುಂಬಾ ಸುಂದರವಾಗಿದೆ.
ಕೌಡಿಕೇರಿ ದಂಡೆಯ ದೃಶ್ಯ. ಇನ್ನು ಸ್ವಲ್ಪ ಹೊತ್ತು ಇದ್ದು ದೇವಸ್ಥಾನ ನೋಡಬಹುದಿತ್ತು, ಆದರೆ ಚಳಿಯಿಂದ ನಾನು, ಭುವನ ಗಡ-ಗಡ ನಡುಗುವದನ್ನು ನೋಡಿ ಎಲ್ಲರೂ ನಗಲು ಶುರು ಮಾಡಿದರು. ಅಲ್ಲದೆ ಟೈಮ್ ಕೂಡ ಕಡಿಮೆ ಇದ್ದಿದ್ದರಿಂದ ಅಲ್ಲಿಂದ ಧಾರವಾಡದ ಕಡೆ ಗಾಡಿ ತಿರುಗಿಸಿದೆವು.
ಅಂತೂ-ಇಂತೂ ಸಮುದ್ರ ನೋಡಿದೆ ಅಂತ ಎಲ್ಲರಿಗೂ ಹೇಳಿಕೊಂಡು ಅಡ್ಯಾಡಬಹುದು ನಾನು, ಅದರ ಅನುಭವ ಹೇಗೆ ಇರ್ಲಿ...

.........

8 comments:

Anonymous said...

Wow!! Beautiful description, really it is green. Though I don't believe in God or miracles but temples are elegant.

Soul said...

Would you please let us read it in English. Is there an English version?

pushpa said...

@Raj, ದೇವರು, ದೇವಾಲಯ ಕೇವಲ ಆ ವಿಗ್ರಹ ಆರಾಧನೆಗೆ ಅಂತ ನನಗಾಣಿಸುವದಿಲ್ಲ, ದೇವರನ್ನು ನೋಡಲು ದೇವಾಲಯಕ್ಕೆ ಹೋದರೆ ಸಕಾರಾತ್ಮಕ ಯೋಚನೆಗಳು, ಶಾಂತಿ, ನೆಮ್ಮದಿ ಮತ್ತು ಧೈರ್ಯ ಬಂದೆ ಬರುತ್ತದೆ. ಅದು ಆ ವಿಗ್ರಹಕಿಂತ ಅಲ್ಲಿನ ವಾತಾವರಣ, ನಮ್ಮ ನಂಬಿಕೆ ಮೇಲೆ ನಿರ್ಭರವಾಗುತ್ತದೆ ಎನ್ನೋದು ನನ್ನ ಅಭಿಪ್ರಾಯ. ದೇವರನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಹೋಗುತ್ತೇವೆ ಎನ್ನೋದು ನೆಪ ಮಾತ್ರ, ಮನಸ್ಸಿನ ಶಾಂತಿ ಪ್ರಮುಖ ಕಾರಣ. ಅದೇನೇ ಇರಲಿ ನನ್ನ ಲೇಖನ ಓದಿದಕ್ಕೆ ತುಂಬಾ ಧನ್ಯವಾದ.

@Soul, I'm comfortable writing in Kannada, hence this article is in Kannada.
Siddi will be publishing an article in English soon.

Soul said...

Awaiting your story in English.Thank you.

Anonymous said...

ತುಂಬಾ ಚೆನ್ನಾಗಿದೆ, ನನಗಂತೂ ಕಡಲತೀರ ಬಹಳ ಇಷ್ಟ, ಜೊತೆಗೆ ದೇವಸ್ಥಾನ ಆಹಾ ಎಂಥ combination, ಇನ್ನೂ ಹೆಚ್ಚು ಈ ತರಹದ ಜಾಗಗಳ ಪರಿಚಯ ಮಾಡಿಸಿಕೊಡಿ, ಧನ್ಯವಾದ

Anonymous said...

Thank you for reading the article 😊

Anonymous said...

ಪುಷಾಪಾರವರೆ ನಿಮ್ಮ ಬರಹದಲ್ಲಿ ಧಾರವಾಡದ ಸುಂದರ ಸೊಗಡಿದೆ, ಅಲ್ಲದೆ ಕಣ್ಣಿಗೆ ಕಟ್ಟಿದಂತೆ ನಿಮ್ಮ ಪ್ರಯಾಣವನ್ನು ವರ್ಣಿಸಿದ್ದೀರಿ. ನಿಮ್ಮ blog post ನಲ್ಲಿನ photos ಅಂತು ನಮ್ಮನ್ನೆ ಅಲ್ಲಿಗೆ ಕರೆದೊಯುತ್ತೆ

Anonymous said...

ಧನ್ಯವಾದಗಳು ನನ್ನ ಬರಹ ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.