Jan 5, 2019

ಅನುಭವ ಮಂಟಪ, ಬಸವಣ್ಣ ಮೂರ್ತಿ ಮತ್ತು ಬಸವೇಶ್ವರ ದೇವಸ್ಥಾನ

ಸೆಪ್ಟೆಂಬರ್ ೨, ೨೦೧೮

ಬೀದರ್ ಕೋಟೆ ನೋಡಲು ಹೋಗಬೇಕು ಎಂದು ಬಹಳ ದಿನದಿಂದ ಅಂದುಕೊಳ್ಳುತ್ತಿದ್ದ ನಾವು, ಸೆಪ್ಟೆಂಬರ್ ೨ ರಂದು ಬೀದರಗೆ ಹೋಗುವ ತಯಾರಿ ನಡೆಸಿದೆವು. ಅಲ್ಲಿಯವರೆಗೂ ಹೋಗಿ ಬರಿ ಬೀದರ್ ಕೋಟೆ ಮಾತ್ರ ನೋಡಿಕೊಂಡು ಬರಲು ಹೇಗೆ ಸಾಧ್ಯ! ಅದರೊಂದಿಗೆ ಬಸವ ಕಲ್ಯಾಣ ಕೂಡ ನೋಡುವದೆಂದು ನಿರ್ಧಾರವಾಯಿತು. ಹೈದೆರಾಬಾದಿನಿಂದ ಹೊರಟು ನೇರವಾಗಿ ಬಸವಕಲ್ಯಾಣಕ್ಕೆ ಹೋಗಿ ಕೋಟೆ ಹಾಗೂ ಬಸವ ಮೂರ್ತಿ ಮತ್ತು ಗುಡಿ ನೋಡಿಕೊಂಡು ಬೀದರ್ ಗೆ ಮರಳಿ ಅಲ್ಲಿಯೇ ಎರಡು ದಿನ ಇದ್ದು ಬೀದರ್ ಕೋಟೆ ಹಾಗೂ ಇನ್ನುಳಿದ ಐತಿಹಾಸಿಕ ಸ್ಥಳಗಳನ್ನು ನೋಡುವದೆಂದು ನಿರ್ಧರಿಸಿಕೊಂಡು ಹೈದೆರಾಬಾದ್ ಬೆಳಿಗ್ಗೆ ೪.೪೫ ರ ಸುಮಾರಿಗೆ ಬಿಟ್ಟೆವು. ಅದೇನೇ ಹೇಳಿ ಪ್ರವಾಸಕ್ಕೆ ನಸುಕಿನಲ್ಲಿ ಹೋಗುವ ಸುಖ ಹೊತ್ತಾಗಿ ಹೋಗುವದರಲ್ಲಿಲ್ಲ. ಈ ಬಾರಿ ಚಪಾತಿ, ಸ್ವಲ್ಪ ನೆನೆ ಹಾಕಿದ ಮಡಿಕೆ ಕಾಳು, ಉಪ್ಪು-ಖಾರ, ಮೊಸರು, ಸೌತೆಕಾಯಿ ಕೂಡ ನಮ್ಮೊಂದಿಗೆ ಪ್ರವಾಸಕ್ಕೆಂದು ಸಜ್ಜಾಗಿತ್ತು.

ಬಸವ ಕಲ್ಯಾಣ ತಲುಪಿದಾಗ ಬೆಳಿಗ್ಗೆ ಸುಮಾರು ೭.೩೦. ನೇರವಾಗಿ ಬಸವ ಮೂರ್ತಿ ನೋಡಲು ಹೋದೆವು ಆದರೆ ಮೂರ್ತಿ ವೀಕ್ಷಣಾವಕಾಶ ಪ್ರವಾಸಿಗರಿಗೆ ತೆರೆದುಕೊಳ್ಳುವದು ಸುಮಾರು ೯ ಗಂಟೆಗೆಂದು ತಿಳಿಯಿತು. ಅಲ್ಲಿಯೇ ಇದ್ದ ಒಂದು ಚಿಕ್ಕ ಹೋಟೆಲಿನಲ್ಲಿ ಎರಡು ಕಪ್ ಚಾ ಮತ್ತು ಪಾರ್ಲೆ-ಜಿ ಬಿಸ್ಕತ್ ತಿಂದೆವು. ಆ ಅಂಗಡಿಯವನು ನಮಗೆ ಅನುಭವ ಮಂಟಪದ ಕುರಿತು ಹೇಳಿದನು. ಹೇಗೂ ಇಲ್ಲಿ ಟಿಕೆಟ್ ಕೊಡುವದು ತಡ ಅಲ್ಲಿಯವರೆಗೆ ಅನುಭವ ಮಂಟಪಕ್ಕೆ ಹೋಗಿ ಬನ್ನಿ ಎಂದನು. ನಾವು ಕೂಡ ಅದೇ ಸರಿ ಎಂದು ಕಾರನ್ನು ಅನುಭವ ಮಂಟಪದ ರಸ್ತೆಯತ್ತ ತಿರುಗಿಸಿದೆವು.

ಅನುಭವ ಮಂಟಪದ ಕುರಿತು ಹೇಳಬೇಕಾದಲ್ಲಿ, ಇದು ಪ್ರಪಂಚದ ಮೊದಲ ಸಂಸತ್ತು,12 ನೇ ಶತಮಾನದಲ್ಲಿ ವೀರಶೈವ ಪಂಥದ ಅನುಯಾಯಿಗಳ, ಸಂತರು ಮತ್ತು ತತ್ವಜ್ಞಾನಿಗಳ ಅಕಾಡೆಮಿಯಾಗಿತ್ತು. ವೀರಶೈವಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಮತ್ತು ತತ್ತ್ವಚಿಂತನೆಯ ಚಿಂತನೆಯ ಕಾರಂಜಿಯಾಗಿದೆ. ಅಲ್ಲಮಪ್ರಭು ಈ ಅನುಭವ ಮಂಟಪದ ಸ್ಥಾಪಕರಾಗಿದ್ದರು. ಈ ಸಂಸ್ಥೆಯು ವಚನ ಸಾಹಿತ್ಯದ ಕಾರಂಜಿಯಾಗಿದ್ದು, ಇದನ್ನು ವೀರಶೈವ ಧಾರ್ಮಿಕ ಮತ್ತು ತತ್ತ್ವಚಿಂತನೆಯ ಚಿಂತನೆಯನ್ನು ಪ್ರಸಾರ ಮಾಡಲು ವೇದಿಕೆಯಾಗಿ ಬಳಸಲಾಯಿತು. ಅಕ್ಕ ಮಹಾದೇವಿ, ಚನ್ನಬಸವಣ್ಣ ಮತ್ತು ಬಸವಣ್ಣ ಮುಂತಾದ ವೀರಶೈಯ ತತ್ವಶಾಸ್ತ್ರದ ಇತರ ಮಹಾ ವ್ಯಕ್ತಿಗಳು ಅನುಭವ ಮಂಟಪದಲ್ಲಿ ಪಾಲ್ಗೊಂಡಿದ್ದರು. ಅನುಭವ ಮಂಟಪವು ಮಹಾಮನೆ ಎಂದು ಕೂಡ ಕರೆಯಲ್ಪಡುತ್ತದೆ.

ಅನುಭವ ಮಂಟಪ ತಲುಪುತ್ತಿದ್ದಂತೆ ಅಲ್ಲಿ ಅನುಭವ ಮಂಟಪ ಹೆಸರುಳ್ಳ ಒಂದು ಕಮಾನನ್ನು ಕಾಣಬಹುದು. ಕಾರನ್ನು ಅಲ್ಲಿಯೇ ಬಿಟ್ಟು ಕಮಾನಿನ ಒಳಗೆ ನಡೆದು ಹೊರಟೆವು. ಮಂಟಪದ ಮೇಲೆ ಶಿವಲಿಂಗದ ಆಕಾರವನ್ನು ಮಾಡಲಾಗಿದೆ.

ಹೊರಗಿನಿಂದ ಅನುಭವ ಮಂಟಪದ ಒಂದು ನೋಟ. ನಾವು ಅಲ್ಲಿ ಹೋಗುವ ಮೊದಲೇ ಒಂದು ಗುಂಪು ಅನುಭವ ಮಂಟಪವನ್ನು ನೋಡಲು ಉತ್ತರಪ್ರದೇಶದ ಅಲಿಘರ್ ಇಂದ ಬಂದಿತ್ತು. ಆ ಗುಂಪು ಮುಸಲ್ಮಾನರದ್ದಾಗಿದ್ದರಿಂದ ಅಲ್ಲಿನ ವ್ಯಕ್ತಿ ಅನುಭವ ಮಂಟಪದ ಕುರಿತು ಹಿಂದಿಯಲ್ಲಿ ಅವರಿಗೆ ವಿವರಣೆ ನೀಡುತ್ತಿದ್ದನು. ಉತ್ತರ ಕರ್ನಾಟಕವು ಹೈದೆರಾಬಾದ್ ಕರ್ನಾಟಕ ಎಂದು ಕರಿಸಿಕೊಳ್ಳುತ್ತದೆ, ಹಿಂದಿ ಕೂಡ ಸ್ವಲ್ಪ ಹೈದೆರಾಬಾದ್ ಹಿಂದಿಯನ್ನೇ ಹೋಲುತ್ತದೆ. ಆತನ ಭಾಷೆ ಕೇಳಲಿಕ್ಕೆ ಹಾಸ್ಯಾಸ್ಪದವಾಗಿಯೂ, ಹಾಗೂ ತುಂಬಾ ಸೊಗಸಾಗಿಯೂ ಇತ್ತು.

ಕಟ್ಟಡವು ತುಂಬಾ ಸರಳ ಮತ್ತು ಸುಂದರವಾಗಿದೆ. ಆಯತಾಕಾರದಲ್ಲಿರುವ ಈ ಕಟ್ಟಡದ ಒಳಗಡೆ ನಟ್ಟ ನಡುವೆ ಆಸನದ ರೀತಿಯಲ್ಲಿ ಕಲ್ಲಿನಿಂದ ಮಾಡಿದ ಆರು ಸೋಪಾನಗಳನ್ನೊಳಗೊಂಡ ಆಕೃತಿ ಇದೆ. ಆರು ಸೋಪಾನಗಳ ಮೇಲೆ ದೇವನಲ್ಲಿ ಐಕ್ಯ ಹೊಂದುವ ಮಾರ್ಗವನ್ನು ಸೂಚಿಸಲಾಗಿದೆ. ಸೋಪಾನಗಳ ಮೇಲೆ ಕೆಳಗಿನಿಂದ ಮೇಲಕ್ಕೆ (ಚಿತ್ರದಲ್ಲಿ ತೋರಿಸಿದಂತೆ) ಭಕ್ತ, ಮಾಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದು ಬರೆಯಲಾಗಿದೆ.

ಮಂಟಪದ ಒಳಗೆ ಗೋಡೆಗೆ ಸುತ್ತಲೂ ಬಸವಣ್ಣ ಹಾಗೂ ಇತರ ಶರಣರು ಮತ್ತು ಅವರ ಜೀವನದ ಅಮೂಲ್ಯ ಘಟನೆಗಳ ಚಿತ್ರಗಳನ್ನು ಹಾಕಿದ್ದಾರೆ. ಈ ಚಿತ್ರಗಳನ್ನೇ ತೋರಿಸಿ ಆ ವ್ಯಕ್ತಿ ಅವರಿಗೆ ವಿವರಣೆ ಕೊಡುತ್ತಿದ್ದನು.

ಶರಣರ ಚಿತ್ರಗಳ ಕುರಿತು ವ್ಯಕ್ತಿಯೊಬ್ಬ ವಿವರಣೆ ಕೊಡುತ್ತಿರುವ ವಿಡಿಯೋ

ಕಟ್ಟಡದ ಹೊರಮಗ್ಗಲಿನ ಗೋಡೆಗೂ ಸಹ ಚಿತ್ರಗಳನ್ನು ಹಾಕಿದ್ದಾರೆ. ಅರ್ಧ ಗಂಟೆ ಸಾಕು ಅನುಭವ ಮಂಟಪ ನೋಡಲು. ಪ್ರವಾಸಿಗರು ಬೇಗ ಹೋದರೆ ಮೊದಲು ಇದನ್ನು ನೋಡಿಕೊಂಡು ನಂತರ ಕೋಟೆ, ಗುಡಿ ಹಾಗೂ ಮೂರ್ತಿ ನೋಡಲು ಹೋಗುವದು ಒಳ್ಳೆಯದೆಂದು ನನ್ನ ಅಭಿಪ್ರಾಯ.

ಅನುಭವ ಮಂಟಪ ನೋಡಿಕೊಂಡು ಹೊರಗೆ ಬಂದೆವು. ಈ ಮಂಟಪದ ಹಿಂದೆ ಒಂದು ದೊಡ್ಡ ಖಾಲಿ ಮೈದಾನವಿದೆ, ಸುತ್ತಲೂ ಮರಗಳು ಹಾಗೂ ನೀರಿನ ಟ್ಯಾಂಕು ಕೂಡ ಇದೆ. ಬೆಳಿಗಿನ ಉಪಹಾರ ಮಾಡಲು ಇದೆ ಸರಿಯಾದ ಜಾಗವೆಂದು ನಾವು ಅಲ್ಲಿಯೇ ಮರದ ಕೆಳಗೆ ಕಾರನ್ನು ನಿಲ್ಲಿಸಿ, ಮನೆಯಿಂದ ತಂದಿದ್ದ ಚಪಾತಿ ಮತ್ತು ಇತರೆ ದಿನಿಸುಗಳನ್ನು ತಿಂದೆವು. ಅಲ್ಲಿಂದ ಬಸವ ಮೂರ್ತಿ ನೋಡಲು ಹೊರಟೆವು.

ಮಹಾಮನೆ ನೋಡಿ ಅಲ್ಲಿಂದ ಬಸವಣ್ಣನವರ ದೊಡ್ಡ ಮೂರ್ತಿಯನ್ನು ನೋಡಲು ಬಂದೆವು. ಟಿಕೆಟ್ ಕೊಡುವ ವ್ಯಕ್ತಿ ಮೊದಲು ಕೆಳಗಿರುವ ಶರಣರ ಗವಿ ನೋಡಿಕೊಂಡು ನಂತರ ಬಸವ ಮೂರ್ತಿ ನೋಡಿ ಎಂದು ಸೂಚಿಸಿದ. ಅದರಂತೆ ನಾವು ಶರಣರ ಗವಿ ನೋಡಲು ಹೊರಟೆವು.

ಶರಣರ ಗವಿ ಕುರಿತು ಹೇಳಬೇಕಾದಲ್ಲಿ ಇದು ಕಲ್ಲು, ಕಬ್ಬಿಣ ಮತ್ತು ಸಿಮೆಂಟ್ ಇಲ್ಲದೆ ಮಾನವ ನಿರ್ಮಿತ ಗುಹೆ. ಇದನ್ನು ರಾಷ್ಟ್ರಕೂಟರ ಕಾಲದ ಅಜಂತಾ ಎಲ್ಲೋರಾ ಗುಹೆಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಈ ಗುಹೆಯ ಒಳಗಡೆ ಶರಣರ (ಅಕ್ಕ ಮಹಾದೇವಿ, ಚೆನ್ನ ಬಸವಣ್ಣ, ನೀಲಾಂಬಿಕಾ, ಮಡಿವಾಳ ಮಾಚಯ್ಯ, ರಾಮೇಶ್ವರ, ಅಲ್ಲಮಪ್ರಭು ಮತ್ತು ಬಸವಣ್ಣನವರ) ಪುತ್ಥಳಿಗಳನ್ನು ಕೆತ್ತಲಾಗಿದೆ. ಅಲ್ಲದೆ ಗುಹೆಯಲ್ಲಿಯೇ ಬಸವ ಪುತ್ಥಳಿಯ ಮುಂದೆ ಕುಳಿತು ಧ್ಯಾನ ಮಾಡಲು ಒಂದು ಧ್ಯಾನ ಮಂದಿರವನ್ನು ಮಾಡುತ್ತಿದ್ದಾರೆ ಅಲ್ಲಿ ಒಂದೇ ಸಮಯಕ್ಕೆ ೧೦೦ ಜನ ಕುಳಿತು ಧ್ಯಾನ ಮಾಡಬಹುದು ಎಂದು ನಮಗೆ ಈ ಗುಹೆ ತೋರಿಸುತ್ತಿದ್ದ ವ್ಯಕ್ತಿ ಹೇಳಿದನು.

 ಈ ಗುಹೆಯನ್ನು ಉಸಿರಾಡುವ ಗುಹೆ ಎಂದು ಕೂಡ ಕರೆಯುತ್ತಾರೆ. ಕಾರಣ ಇಲ್ಲಿ ಒಂದೇ ಸಮಯಕ್ಕೆ ಸಾವಿರ ಜನ ಒಳಗೆ ಹೋದರು ಉಸಿರಾಡಲು ಯಾವುದೇ ಕಷ್ಟವಾಗುವದಿಲ್ಲ. ಹೊರಗಿನಂತೆಯೇ ಹವಾಗುಣ ಒಳಗೆಯೂ ಇದೆ.

ಕೆಳಗಿನ ಚಿತ್ರದಲ್ಲಿ ಎಡಬದಿಯಲ್ಲಿ ಕಾಣುವ ಪುತ್ಥಳಿ ಶ್ರೀ ಚನ್ನಬಸವಣ್ಣನವರದು. ಇವರು ಬಸವಣ್ಣನವರ ಸೋದರಳಿಯ. ಬಲಬದಿಯಲ್ಲಿ ಲಿಂಗ ಪೂಜೆ ಮಾಡುತ್ತಿರುವ ಮಡಿವಾಳ ಮಾಚಯ್ಯನವರ ಪುತ್ಥಳಿ.

ಬಸವ ಧರ್ಮ ಪೀಠದ ಪೀಠಾಧ್ಯಕ್ಶ್ಯೇ  ಮಾತೆ ಮಹಾದೇವಿ ಇವರ ಆಸಕ್ತಿಯ ಫಲವಾಗಿ ಈ ಗುಹೆಯ ನಿರ್ಮಾಣವಾಗಿದೆ.

ಶರಣರ ಗುಹೆಯಿಂದ ಹೊರಬಂದು ಬಸವ ಪುತ್ಥಳಿ ನೋಡುವದರಲ್ಲಿ ನಿರತರಾದೆವು. ನಾನು ಮೊದಲ ಬಾರಿಗೆ ಬಸವ ಕಲ್ಯಾಣಕ್ಕೆ ಬಂದಿದ್ದರಿಂದ ಪುತ್ಥಳಿ ನೋಡಿ ಆಶ್ಚರ್ಯ ಪತ್ತೆ. ೧೦೮ ಅಡಿ ಎತ್ತರದ ಈ ಪುತ್ಥಳಿ ಕೆಳಗೆ ನಿಂತು ನೋಡುತ್ತಿದ್ದರೆ ಬಸವಣ್ಣನವರ ತಲೆ ಆಕಾಶಕ್ಕೆ ಹತ್ತಿದೆ ಎಂದು ಭಾಸವಾಗುವಂತಿದೆ.

ಇಲ್ಲಿಯೂ ಕೂಡ ಸೋಪಾನಗಳ ಮೇಲೆ ಶರಣರ ಪುತ್ಥಳಿಗಳನ್ನು ಮಾಡಿ ಎತ್ತರದ ಕೊನೆಯಲ್ಲಿ ದೊಡ್ಡ ಬಸವ ಪುತ್ಥಳಿ ಪ್ರತಿಸ್ಥಾಪನೆಯಾಗಿದೆ. ಒಂದು ಕೈಯಲ್ಲಿ ವಚನಗಳ ಹೊತ್ತಿಗೆ, ಮತ್ತೊಂದು ಕೈಯಿಂದ ಆಶೀರ್ವಾದ ಮಾಡುತ್ತಿರುವ ಬಸವ ಮೂರ್ತಿ ನೋಡಲು ಎರಡು ಕಣ್ಣು ಸಾಲದು. ಮೂರ್ತಿಯ ಮುಂದೆ ತುಂಬಾ ಸುಂದರವಾದ ಕೈತೋಟವನ್ನು ಮಾಡಿದ್ದಾರೆ. ಪುತ್ಥಳಿಯ ಕೆಳಗೆ ಒಂದು ಸಭಾಂಗಣ ಮಾಡಿ ಪ್ರಾರ್ಥನಾ ಮಂದಿರವನ್ನು ಮಾಡಿದ್ದಾರೆ. ಪ್ರಾರ್ಥನಾ ಮಂದಿರದಲ್ಲಿ ಕುಳಿತರೆ ಮನಸಿಗೆ ಶಾಂತಿ ಎನಿಸಿ ಹೊರಬರಲು ಮನಸಾಗುವದೇ ಇಲ್ಲ.

ಬಸವ ಮೂರ್ತಿಯನ್ನು ನೋಡಿಕೊಂಡು, ಎಡಗಡೆ ಬಂದರೆ ಶರಣರ ಜೀವನದಲ್ಲಿ ನಡೆದ ಮಹತ್ವದ ಘಟನೆಗಳ ಸಂದರ್ಭಗಳ ಮೂರ್ತಿಗಳನ್ನು ಮಾಡಿದ್ದಾರೆ. ಕೆಳಗೆ ಚಿತ್ರದಲ್ಲಿ ಕಾಣುತ್ತಿರುವದು ಮಹಾ ಶರಣ ಹರಳಯ್ಯ ಹಾಗೂ ಅವನ ಹೆಂಡತಿ ಶರಣೆ ಕಲ್ಯಾಣಮ್ಮ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗಾಗಿ ಪಾದುಕೆಗಳನ್ನು ಮಾಡುತ್ತಿರುವ ಸಂದರ್ಭ. ಪಾದುಕೆಗಳನ್ನು ಮಾಡಿ ಒಂದು ಬುಟ್ಟಿಯಲ್ಲಿ ಹೂ ಹಾಸಿ ಅದರಲ್ಲಿ ಪಾದುಕೆಗಳನ್ನಿಟ್ಟುಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟಾಗ, ಬಸವಣ್ಣನವರು ಈ ಪಾದುಕೆಗಳು ಕಾಲಿನಲ್ಲಲ್ಲ ನನ್ನ ತಲೆಯ ಮೇಲಿರಬೇಕಾದವೆಂದು ಅವನ್ನು ತಲೆಯಮೇಲೆ ಇಟ್ಟುಕೊಂಡಿದ್ದರು. ಬಿಜ್ಜನಹಳ್ಳಿಯಲ್ಲಿ  ಈಗಲೂ ಕೂಡ ಈ ಪಾದುಕೆಗಳನ್ನು ನೋಡಬಹುದು.

೧೨ ನೇ ಶತಮಾನದಲ್ಲಿ ಜಾತಿಪದ್ಧತಿಯನ್ನು ಖಂಡಿಸಿ ಬಸವಣ್ಣನವರು ಬ್ರಾಹ್ಮಣನಾದ ಮಧುವರಸನ ಮಗಳಿಗೆ ಹಾಗೂ ಸಮಗಾರ ಹರಳಯ್ಯನ ಮಗನಿಗೆ ಅಂತರ್ಜ್ಯಾತಿ ವಿವಾಹ ಮಾಡಿಸಿದಾಗ, ಬಿಜ್ಜಳ ರಾಜ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ಕೊಟ್ಟು, ಆ ವಿವಾಹ ಮಾಡಿಸಿದ ಮಧುವರಸ, ಹರಳಯ್ಯ ಹಾಗೂ ಅವನ ಮಗನನ್ನು ಆನೆ ಕಾಲಿಗೆ ಕಟ್ಟಿ ಎಳೆಸಿದನು.ಇದನ್ನೇ ಬಿಂಬಿಸುವ ಮೂರ್ತಿಗಳನ್ನು ಇಲ್ಲಿ ಮಾಡಲಾಗಿದೆ.
ಬಸವ ಪುತ್ಥಳಿಯ ಪಕ್ಕದಲ್ಲಿಯೇ ಅಕ್ಕ ಮಹಾದೇವಿ ಗವಿ ಇದೆ. ಇದನ್ನು ನೋಡಲು ಹೋದಾಗ ಕೆಲಸ ನಡೆದಿದ್ದರಿಂದ ಗವಿಯನ್ನು ನೋಡಲು ಆಗಲಿಲ್ಲ. ಇಷ್ಟು ನೋಡಿಕೊಂಡು ಬಸವೇಶ್ವರರ ಗುಡಿ ನೋಡಲು ನಗರದತ್ತ ನಡೆದೆವು. ನಗರದ ಮಧ್ಯವಿರುವ ಈ ಗುಡಿ ತುಂಬಾ ಸರಳವಾದ ಶೈಲಿಯಲ್ಲಿದೆ. ಎಲ್ಲ ದೇವಸ್ಥಾನಗಳಂತೆ ಇದಕ್ಕೂ ಕೂಡ ಶಿಖರವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಹೊರಗೆ ಅಂಗಣವನ್ನು ಮಾಡಲಾಗಿದೆ. ಬಸವ ದೇವನ ದರ್ಶನವಾದ ಮೇಲೆ ಅಲ್ಲಿ ಕುಳಿತುಕೊಳ್ಳಬಹುದು.

ಗರ್ಭಗುಡಿಯಲ್ಲಿರುವ ಬಸವಣ್ಣನವರ ಸುಂದರ ಮೂರ್ತಿ.

ಗುಡಿ ದರ್ಶನವಾದ ಮೇಲೆ ನಾವು ಇನ್ನು ಕೋಟೆ ನೋಡಬೇಕಿತ್ತು, ಅಲ್ಲದೆ ಹೊಟ್ಟೆ ಬೇರೆ ಹಸಿದಿತ್ತು. ನಾವು ಮತ್ತೆ ಕಾರನ್ನು ಅನುಭವ ಮಂಟಪದ ಪಕ್ಕಕ್ಕಿರುವ ಖಾಲಿ ಮೈದಾನದತ್ತ ತಿರುಗಿಸಿದೆವು. ಏಕೆಂದರೆ ಊಟ ಮಾಡಲು ಅಷ್ಟೊಂದು ಪ್ರಶಸ್ತ ಸ್ಥಳ ಬೇರೆ ಎಲ್ಲೂ ಇರಲಿಲ್ಲ. ಅಲ್ಲಿಯೇ ಕುಳಿತು ಮನೆಯಿಂದ ತಂದ ಊಟ ಮಾಡಿ ಕೋಟೆ ನೋಡಲು ಹೊರಟೆವು.

ಬಸವ ಕರ್ಮಭೂಮಿಯಾದ ಕಲ್ಯಾಣದಲ್ಲಿ ನೋಡಬೇಕಾದ ಇನ್ನಿತರ ಸ್ಥಳಗಳು:

  1. ಶರಣ ಉರಿಲಿಂಗ ಪೆದ್ದಿ ಮಠ 
  2. ಸಭಾ ಭವನ
  3. ಕಂಬಳಿ ಮಠ
  4. ಶರಣ ಶೈತ್ಯ ಗ್ರಂಥಾಲಯ (Sharana Litreature Library)
  5. ಶರಣ ಅಲ್ಲಮ ಪ್ರಭು ಗದ್ದುಗೆ ಮಠ
  6. ಹರಳಯ್ಯ ಮತ್ತು ಇತರ ಶರಣರ ಗವಿ
  7. ಶರಣ ಮಡಿವಾಳ ಮಾಚಯ್ಯ ಹೊಂಡ 
  8. ಶರಣೆ ಅಕ್ಕ ನಾಗಮ್ಮ ಗವಿ
  9. ಬಸವ ಅರಿವಿನ ಮನೆ 
  10. ಅಕ್ಕ ಮಹಾದೇವಿ ಆಶ್ರಮ 
  11. ಘನಲಿಂಗ ರುದ್ರಮುನಿ ಗವಿ
  12. ಶರಣ ನೂಲಿ ಚಂದಯ್ಯ ಗವಿ
  13. ತ್ರಿಪುರಾಂತ ಕೆರೆ 

.........

4 comments:

Unknown said...

Good analysis sir

sharanu said...

it is not veerashaiva,it is known as lingayath,there is lot of difference between veerashaiva and lingayath

siddeshwar said...

Personally I see them as one. Maybe I'm ignorant. Could you elaborate your comment for the benefit of readers here. What are the differences between them.

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ said...

jayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ