Apr 14, 2018

ನಾಗಾರ್ಜುನಕೊಂಡ ಪ್ರವಾಸ - ಭಾಗ ೨

..ನಾಗಾರ್ಜುನಕೊಂಡ ಪ್ರವಾಸ - ಭಾಗ ೧ ರಿಂದ ಮುಂದುವರೆದಿದೆ

ನಾಗಾರ್ಜುನಕೊಂಡದಲ್ಲಿ ನೋಡಲು ತುಂಬಾ ಸ್ಮಾರಕಗಳಿವೆ. ಒಂದು ಘಂಟೆಯಲ್ಲಿ ಅರ್ಧಭಾಗ ಕೂಡ ನೋಡಲಾಗುವದಿಲ್ಲ, ಹಾಗಿದ್ದಮೇಲೆ ಒಂದೇ ಸಲ ಎಲ್ಲ ಬರೆಯುವದು ಕಷ್ಟ. ಆದ ಕಾರಣ ಈ ಎರಡನೇ ಭಾಗ.

ಕೆಳಗೆ ಚಿತ್ರದಲ್ಲಿರುವ ಸ್ತೂಪದ ಹೆಸರು ಬೋಧಿಶ್ರೀ ಸ್ತೂಪ. ಇಲ್ಲಿರುವ ಎಲ್ಲ ಸ್ತೂಪಗಳ ರಚನೆ ನೋಡಲು ಒಂದೇ ತರ ಇವೆ. ಮೂರನೇ ಶತಮಾನದಲ್ಲಿ ನಿರ್ಮಿಸಲಾದ ಈ ಸ್ತೂಪವು ಚುಲಧರ್ಮಗಿರಿಯ ಒಂದು ಭಾಗ. ಉಪಾಸಿಕಾ ಬೋಧಿಶ್ರೀ ಎಂಬ ಶಿಷ್ಯ ಈ ಸ್ತೂಪ ನಿರ್ಮಾಣಕ್ಕೆ ಕಾಣಿಕೆ ನೀಡಿದ್ದನೆಂದು, ಈ ಸ್ತೂಪಕ್ಕೆ ಅವನ ಹೆಸರೇ ಬಂದಿರಬಹುದು.


ನಾಗಾರ್ಜುನ ಕೊಂಡ ಮೊದಲು ಕೋಟೆ ಇತ್ತೆಂದು ಅಲ್ಲಿನ ಅವಶೇಷಗಳನ್ನು ನೋಡಿದರೆ ತಿಳಿದುಬರುತ್ತದೆ. ಬೌದ್ಧ ಅವಶೇಷಗಳನ್ನೆಲ್ಲ, ಕೃಷ್ಣ ನದಿಗೆ ಆಣೆಕಟ್ಟು ಕಟ್ಟಿದಾಗ ನಾಗಾರ್ಜುನಕೊಂಡಕ್ಕೆ ಸಾಗಿಸಿ ಅಲ್ಲಿ ಪುನರ್ನಿರ್ಮಾನಿಸಲಾಗಿದೆ. ಅದಕ್ಕೂ ಮೊದಲು ಅಲ್ಲಿರುವ ಈ ಹಿಂದೂ ದೇವಾಲಯ ಈಗ ಹಾಳುಬಿದ್ದಿದೆ. ಈ ದೇವಾಲಯ ಇಕ್ಷ್ವಾಕು ರಾಜರ ಕಾಲದಲ್ಲಿ ನಿರ್ಮಿಸಲಾಗಿರಬಹುದೆಂದು ಹೇಳಬಹುದು.


ಚಾಂತಶ್ರೀ ಚೈತ್ಯ ಗ್ರಿಹ ಸ್ತೂಪ. ಈ ಸ್ತೂಪವನ್ನು ವಶಿಸ್ಥಿಪುತ್ರ ಚಂತಮೂಲನ ತಂಗಿಯಾದ ರಾಣಿ ಚಾಂತಾಶ್ರೀ ಕಟ್ಟಿಸಿದಳೆಂದು ಹೇಳಲಾಗಿದೆ. ಅಬ್ಬಾ! ಸಿದ್ದಿ ಬ್ಲಾಗ್ ನಾನು ಮೊದಲು ಓದುತ್ತಿದ್ದಾಗ ಈ ಕೆಲಸ ತುಂಬಾ ಸರಳ ಅಂದುಕೊಂಡಿದ್ದೆ. ಆದರೆ ಈಗ ತಿಳಿಯುತ್ತಿದೆ ಅದರ ಹಿಂದಿರುವ ಪ್ರಯತ್ನ ಹಾಗೂ ತಾಳ್ಮೆ. ಧಗ ಧಗ ಉರಿಯುವ ಬಿಸಿಲಿನಲ್ಲಿ ಇಷ್ಟು ನೋಡುವದರೊಳಗೆ ನಮಗೆ ಸಾಕಾಗಿ ಸುಸ್ತಾಗಿ ಎಲ್ಲಿಯಾದರೂ ಕುಳಿತರೆ ಸಾಕು ಎನಿಸಿಬಿಟ್ಟಿತ್ತು. ಆದರೆ ನೋಡುವದು ಇನ್ನು ತುಂಬಾ ಇದ್ದಿದ್ದರಿಂದ, ಇಲ್ಲಿಯವರೆಗೂ ಬಂದಿದ್ದಕ್ಕೆ ಸಾರ್ಥಕವಾಗಲಿ ಎಂದು ಮತ್ತೆ ಮುಂದುವರೆಯತೊಡಗಿದೆವು.


ಮಹಾಸ್ತೂಪ ಎಂದು ಕರೆಯಲ್ಪಡುವ ಈ ಕಟ್ಟಡ ವೃತ್ತಾಕಾರದಾಗಿದ್ದು ತುಂಬಾ ವಿಶಾಲವಾಗಿದೆ. ನಾವು ಇದನ್ನು ನೋಡಲು ಹೋದಾಗ ಅಲ್ಲಿಯ ಸೆಕ್ಯೂರಿಟಿ ನಮಗೆ ಮಹಾಸ್ತೂಪದ ಕುರಿತು ಹೇಳುತ್ತಾ ಕೈ ತೋರಿಸಿ ಅಲ್ಲಿ ಬುದ್ಧನ ಬಂಗಾರದ ಹಲ್ಲು ದೊರೆತಿದೆ. ಅದನ್ನು ಸರಕಾರ ಯಾವುದೊ ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿಟ್ಟಿದೆ(ಸಂಗ್ರಹಾಲಯದ ಹೆಸರು ಮರೆತುಹೋಗಿದೆ). ಅದನ್ನು ನೋಡಲು ಮೊದಲು ಪರವಾನಿಗೆ ಪತ್ರ ಪಡೆಯಬೇಕು ಎಂದು ಹೇಳುತ್ತಿದ್ದ. ಈ ಮಹಾಸ್ತೂಪದ ಮೇಲೆ ಇರುವ ಕಂಬಗಳ ಮೇಲೆ ಶಾಸನವನ್ನು ಕಾಣಬಹುದು.


 ಅಲ್ಲದೆ ಇಲ್ಲಿನ ಇಟ್ಟಿಗೆಗಳು ಗಟ್ಟಿ ಮತ್ತು ಆಕಾರದಲ್ಲಿ ದೊಡ್ಡದಾಗಿವೆ. ನಾನು ಈಗಿನ ಇಟ್ಟಂಗಿ ಭಟ್ಟಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಹಾಗೂ ಇಟ್ಟಿಗೆಗಳ ತಯಾರಿಕೆ ಮತ್ತು ಅವುಗಳ ಗುಣಮಟ್ಟ ಕೂಡ ನನಗೆ ಪರಿಚಯವಿದೆ. ಅವುಗಳಿಗೆ ಈ ಇಟ್ಟಿಗೆಗಳನ್ನು ಹೋಲಿಸುವದು ಅಸಾಧ್ಯ . ಇದನ್ನೆಲ್ಲ ನೋಡಿದರೆ ನನಗೆ ಆಧುನಿಕ ಟೆಕ್ನಾಲಜಿ ಬೆಳವಣಿಗೆಯತ್ತ ಸಾಗುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಇಲ್ಲಿ ಬರಿ ಇಟ್ಟಿಗೆಯ ಮಾತಲ್ಲ ಪ್ರತಿಯೊಂದು ವಸ್ತುವನ್ನು ಗಮನಿಸಿದಾಗ ಇದೆ ಯೋಚನೆ ಬರುತ್ತದೆ. "OLD IS GOLD " ಸುಳ್ಳಲ್ಲ ಬಿಡಿ.


ಮಹಾಸ್ತೂಪವನ್ನು ನೋಡಿಕೊಂಡು ಮುಂದೆ ದಲಾಯಿಲಾಮಾ ನೆಟ್ಟ ಗಿಡವನ್ನು ನೋಡಲು ಬಂದೆವು. ಈ ಕೆಳಗಿನ ಆಲದ ಗಿಡವನ್ನು ದಲಾಯಿಲಾಮಾ ಬಂದು ಪೂಜೆ ಮಾಡಿ ನೆಟ್ಟು ಹೋದನೆಂದು ಅದೇ ಸೆಕ್ಯೂರಿಟಿ ಹೇಳುತ್ತಿದ್ದನು. ಆ ಗಿಡಕ್ಕೆ ದಲಾಯಿಲಾಮಾ ಟ್ರೀ ಎಂದು ಫಲಕ ಕೂಡ ಹಾಕಿದ್ದಾರೆ.


ಇಕ್ಷವಾಕು ರಾಜರುಗಳು ಅಶ್ವ ಬಲಿದಾನಕ್ಕೆ ಹೆಸರುವಾಸಿಯಾಗಿದ್ದರು. ಆಮೆಯ ಆಕಾರದಲ್ಲಿರುವ ಈ ಕುಂಡದಲ್ಲಿ ಅವರು ಕುದುರೆಯ ಭಾಗಗಳನ್ನು ಬಲಿ ಕೊಡುತ್ತಿದ್ದರೆಂದು ಹೇಳಲಾಗುತ್ತದೆ. ಈ ಕುಂಡ ಆಮೆಯ ಆಕಾರದಲ್ಲಿರುವದರಿಂದ ಇದಕ್ಕೆ ಕೂರ್ಮ ಚಿತಿ ಎಂದು ಕರೆಯುತ್ತಾರೆ.


ಈ ಚಿತ್ರದಲ್ಲಿರುವ ಕುಂಡವನ್ನು ಅಶ್ವಮೇಧಕುಂಡ ಎಂದು ಕರೆಯುತ್ತಾರೆ. ಅಶ್ವ ಬಲಿದಾನಕ್ಕೆ ಮೊದಲು ಕೊನೆಯ ಪವಿತ್ರ ಸ್ನಾನ ಈ ಕುಂಡದ ನೀರಿನಿಂದ ಮಾಡಿಸಲಾಗುತ್ತಿತ್ತು.


ಅಶ್ವಮೇಧ ಕುಂಡ ನೋಡಿದ ನಂತರ ನಾನು, ಭುವನ ಸುಸ್ತಾಗಿ ಕುಳಿತುಕೊಳ್ಳಲು ಜಾಗ ನೋಡಲು ಶುರು ಮಾಡಿದೆವು. ಸಿದ್ದಿ ನಮ್ಮನ್ನು ಎಲ್ಲಿಯಾದರೂ ನೆರಳಿಗೆ ಕುಳಿತುಕೊಳ್ಳುವಂತೆ ಹೇಳಿ ಮುಂದೆ ಇರುವ ಸ್ಮಾರಕಗಳನ್ನು ನೋಡಲು ಹೊರಟರು. ಅವರು ನೋಡಿದ ಈ ಸ್ವಸ್ತಿಕ ಸ್ತೂಪ ನನಗನಿಸಿದಂತೆ ಆ ಬೌದ್ಧ್ ವಿಹಾರದಲ್ಲಿರುವ ಅತಿ ವಿಭಿನ್ನವಾದ ಸ್ಮಾರಕ. ವೃತ್ತಾಕಾರದ ಮಧ್ಯಭಾಗದಲ್ಲಿ ಸ್ವಸ್ತಿಕ ಆಕೃತಿ ತುಂಬಾ ಆಕರ್ಷಕವಾಗಿ ಕಂಡಿತು.


ಸಿದ್ದಿ ಬರುವವರೆಗೆ ನಾವು ದಲಾಯಿಲಾಮಾ ಮರದ ಹತ್ತಿರ ಕುಳಿತು ಸೌತೆಕಾಯಿ ತಿನ್ನಲು ಶುರುಮಾಡಿದೆವು. ಆ ಬಿಸಿಲಿನ ಧಗೆಯಲಿ ಸೌತೆಕಾಯಿ ತುಂಬಾ ಹಿತ ನೀಡಿತು. ಎಲ್ಲಿಯಾದರೂ ಪ್ರವಾಸ ಎಂದರೆ ಸಾಕು ಸಿದ್ದಿ ಸೌತೆಕಾಯಿ, ನೆನೆ ಹಾಕಿದ ಹೆಸರು ಮತ್ತು ಮಡಿಕೆ ಕಾಳು ಡಬ್ಬಿಗೆ ಹಾಕಿ ಇಟ್ಟುಕೊಂಡಿರುತ್ತಾರೆ. ಸುಮಾರು ಏಳು ವರ್ಷಗಳಿಂದ ನಾನು ಸಿದ್ಧಿಯನ್ನು ನೋಡುತ್ತಿದ್ದೇನೆ, ತುಂಬಾ ಪೌಷ್ಟಿಕ ಆಹಾರ ತಿನ್ನುವ ರೂಢಿ ಇಟ್ಟಿದ್ದಾರೆ. ನನಗನಿಸಿದಂತೆ ಎಲ್ಲ ನಮ್ಮ ಅತ್ತೆಯ ತರಬೇತಿ. ಈ ಕಾರಣದಿಂದ ನಾವು ಸುಸ್ತಾದರೂ ಸಿದ್ದಿ ಮಾತ್ರ ಸುಸ್ತಾಗೋದೇ ಇಲ್ಲ.

ಸಿದ್ದಿ ಸ್ವಸ್ತಿಕ ಸ್ತೂಪ ನೋಡಿಕೊಂಡು ಬಂದ ನಂತರ ಅವರಿಗೂ ಸೌತೆಕಾಯಿ ಕೊಟ್ಟು, ಅವರು ತಿಂದ ನಂತರ ಮುಂದೆ ಹೊರಟೆವು. ಸೆಕ್ಯೂರಿಟಿ, ಮುಂದೆ ಒಂದು ದೊಡ್ಡ ಬಾವಿ ಇದೆ ನೋಡಿಕೊಂಡು ಹೋಗಿ ಚೆನ್ನಾಗಿದೆ ಎಂದು ಹೇಳಿದ್ದ. ಅಲ್ಲಿಂದ ಬಾವಿ ನೋಡಲು ಹೊರಟೆವು.

ಬಾವಿ ಕೋಟೆಯ ಈ ಸಣ್ಣ ಬಾಗಿಲಿನ ಆ ಕಡೆ ಇದೆ.


ನಾನು ಬಾವಿ ಎಂದರೆ ಚಿಕ್ಕ ಬಾವಿ ಇರಬೇಕೆಂದು ತಿಳಿದಿದ್ದೆ, ಆದರೆ ಇಲ್ಲಿ ಬಂದು ನೋಡಿದರೆ ವೃತ್ತಾಕಾರದ ವಿಶಾಲ ಬಾವಿ. ಅಬ್ಬಾ..!! ಎಷ್ಟೊಂದು ವಿಸ್ತೀರ್ಣ ಹೊಂದಿದೆ ಈ ಬಾವಿ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಬಾವಿಯಲ್ಲಿ ಸ್ವಲ್ಪ ನೀರಿತ್ತು. ಬಾವಿಗೆ ಇಳಿಯಲು ಮೆಟ್ಟಿಲುಗಳನ್ನು ಕೂಡ ಮಾಡಿದ್ದರು. ನಾವು ಅದನ್ನು ನೋಡುತ್ತಿರುವಾಗಲೇ ಮತ್ತೆ ಸ್ವಲ್ಪ ಜನ ಬಾವಿ ನೋಡಲು ಬಂದರು.



ಬಾವಿ ನೋಡಿದ ನಂತರ ಹಸಿವಾಗಿದ್ದರಿಂದ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವಸ್ತುಸಂಗ್ರಹಾಲಯದ ಎದುರಿರುವ ದೊಡ್ಡ ಮರದ ಕೆಳಗೆ ಕುಳಿತೆವು. ಬೆಳಿಗ್ಗೆ ಕಟ್ಟಿಸಿಕೊಂಡು ಬಂದ ಇಡ್ಲಿ ಚಟ್ನಿತಿಂದು, ಅದೇ ಮರದಡಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದೆವು. ಅಲ್ಲಲ್ಲಿ ತೆಗ್ಗು ಬಿದ್ದಿದನ್ನು ನೋಡಿ ನಾನು ಸಿದ್ದಿ ಗೆ ಕೇಳಿದೆ, ಆಗ ಸಿದ್ದಿ ಹೇಳಿದರು ಅಲ್ಲಿ ಕಾಡು ಹಂದಿಗಳು ತುಂಬಾ ಇವೆ ಅವೇ ಈ ರೀತಿ ತೆಗ್ಗು ತೆಗೆಯುತ್ತವೆ ಅಂತ.

ವಿಶ್ರಾಂತಿ ತೆಗೆದುಕೊಂಡ ನಂತರ ವಸ್ತುಸಂಗ್ರಹಾಲಯ ನೋಡಿದೆವು. ಬೌದ್ಧ ಧರ್ಮದ ಮೂರ್ತಿಗಳು, ಕಲಾಕೃತಿಗಳು, ಚಿತ್ರಕಲೆ, ಶಿಲಾಯುಗದ ಆಯುಧಗಳು ಮುಂತಾದವನ್ನೊಳಗೊಂಡ ಸಂಗ್ರಹಾಲಯ ನಮ್ಮನ್ನು ಆಕರ್ಷಿಸಿತು.  ಸಂಗ್ರಹಾಲಯದಲ್ಲಿ ದೊಡ್ಡ ದೊಡ್ಡ ಪೆಡಸ್ಟಲ್ ಫ್ಯಾನ್ ಗಳ ಗಾಳಿ ಮನಸ್ಸಿಗೆ ಹಾಯ್ ಅನಿಸಿತು. ಇಷ್ಟು ನೋಡಿ ಮುಗಿಸುವದರಲ್ಲಿ, ನಮಗೆ ಸಾಕಾಗಿದ್ದರಿಂದ ಹೋಗೋಣ ಬನ್ನಿ ಎಂದು ತೆಲಂಗಾಣ ಪ್ರವಾಸೋದ್ಯಮದ ಹಡಗು ಬರುವ ಜಾಗಕ್ಕೆ ಹೋಗಿ ಕುಳಿತುಕೊಂಡೆವು. ಸುಮಾರು ೩.೪೫ ಮಧ್ಯಾಹ್ನ ನಮ್ಮ ನಾಗಾರ್ಜುನ ಕೊಂಡದ ದರ್ಶನ ಮುಗಿದಿತ್ತು. ಹಡಗು ೪.೩೦ ಗೆ ಬರುತ್ತೆ ಎಂದು ಹೇಳಿದಕ್ಕೆ ಅಲ್ಲಿಯೇ ಮರದ ಕೆಳಗೆ, ಕೃಷ್ಣ ನದಿಯ ನೀರನ್ನು ನೋಡುತ್ತಾ ಕುಳಿತೆವು.

೪.೩೦ ಕ್ಕೆ ಹಡಗು ತನ್ನ ಆ ದಿನದ ಕೊನೆಯ ಪ್ರಯಾಣಿಕರನ್ನು ಹೊತ್ತು ಬಂದಿತು. ಅವರಿಗೆ ಕೇವಲ ಒಂದು ಗಂಟೆ ಕಾಲಾವಕಾಶ ನೀಡಲಾಯ್ತು ಹೋಗಿ ನಾಗಾರ್ಜುನಕೊಂಡ ನೋಡಿಕೊಂಡು ಬರಲು. ನನಗನಿಸಿದಂತೆ ಅವರು ಆ ಐತಿಹಾಸಿಕ ಸ್ಥಳ ನೋಡಲು ಬಂದಂತೆ ಕಾಣಲಿಲ್ಲ. ಸುಮ್ಮನೆ ಹಡಗು ಪ್ರಯಾಣ ಮಾಡಲು ಬಂದಂತೆ ಕಂಡರು. ನಾವು ಹಡಗು ಹತ್ತಿ ಕುಳಿತುಕೊಂಡೆವು. ಯಾವುದೊ ರಾಜಕೀಯ ವ್ಯಕ್ತಿ ತನ್ನ ಪರಿವಾರ ಸಮೇತ ಕೊನೆಯ ಪ್ರವಾಸಿ ಗುಂಪಿನಲ್ಲಿ ಬಂದಿದ್ದ. ಅವನಿಗಾಗಿ ಒಬ್ಬ ಪೊಲೀಸ್ ಹಡಗಿನಲ್ಲಿ ಕುಳಿತುಕೊಳ್ಳಲು ಕುರ್ಚಿಗಳನ್ನು ಜೋಡಿಸಿ ಅವನ್ನು ಕಾಯ್ದಿರಿಸುತ್ತಿದ್ದ. ಅಲ್ಲಿ ಯಾರಾದರೂ ಪ್ರವಾಸಿಗರು ಕುಳಿತುಕೊಳ್ಳಲು ಬಂದರೆ ಎಬ್ಬಿಸಿ ಕಳುಹಿಸುತ್ತಿದ್ದ. ಈ ಪದ್ಧತಿ ಯಾವಾಗ ಸುಧಾರಿಸುತ್ತೋ ಗೊತ್ತಿಲ್ಲ. ಸ್ವಲ್ಪ ಸಮಯದ ನಂತರ ಒಂದು ಜೋಡಿ ಆ ಕಾಯ್ದಿರಿಸಿದ ಜಾಗದಲ್ಲಿ ಕುಳಿತರು. ಪೊಲೀಸ್ ಬಂದು ಎದ್ದೇಳಲು ಹೇಳಿದ. ಅವರು ನಾವು ಟಿಕೆಟ್ ತಗೊಂಡೆ ಕೂತಿರೋದು ಏಳೋಕಲ್ಲ ಎಂದು ಹೇಳಿದರು. ಆದರೆ ಈ ರೀತಿ ಪ್ರತಿಭಟಿಸೋರು ಎಲ್ಲೋ ಕೆಲವು ಜನ ಮಾತ್ರ. ಬಹಳಷ್ಟು ಜನ ಹೆದರಿ ಸುಮ್ಮನಾಗುತ್ತಾರೆ. ಕೊನೆಗೆ ಆ ರಾಜಕೀಯ ವ್ಯಕ್ತಿ ಹಡಗು ಚಾಲನೆ ಯಂತ್ರದ ಕೊನೆಯಲ್ಲೂ, ಅವನ ಪರಿವಾರ ಅಲ್ಲಿ-ಇಲ್ಲಿ ಜಾಗ ಮಾಡಿಕೊಂಡು ಕುಳಿತುಕೊಳ್ಳಬೇಕಾಯಿತು. ೫.೩೦ ಸುಮಾರಿಗೆ ಹಡಗು ಹೊರಟಿತು. ನಮಗೆ ಬಿಸಿ ಬಿಸಿ ಚಾ ಸಿಕ್ಕರೆ ಸಾಕು ಎನಿಸಿತ್ತು. ಮತ್ತೆ ನೀರಿನ ಸೌಂದರ್ಯ, ಹಕ್ಕಿಗಳು ಗೂಡಿಗೆ ಮರಳುವದು, ಸೂರ್ಯ ದಿನಕ್ಕೆ ವಿದಾಯ ಹೇಳಿ ಕೆಳಜಾರುವ ಅದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತ ಸಾಗಿದೆವು........


ವಿಜಯ ವಿಹಾರ ತಲುಪಿದ ತಕ್ಷಣವೇ ಅಲ್ಲಿಯೇ ಮುಂದಿರುವ ಒಂದು ಚಿಕ್ಕ ಹೋಟೆಲಿನಲ್ಲಿ ಮಿರ್ಚಿ ತಿಂದು ಚಹಾ ಕುಡಿದೆವು. ಮಾರನೆಯ ದಿನ ಅನುಪು ನೋಡಲು ಹೋಗುವ ಪ್ಲಾನ್ ಇದ್ದಿದ್ದರಿಂದ, ಬೇಗ ಊಟ ಮಾಡಿ ಮಲಗಿಕೊಂಡೆವು.

ಮರಳಿ ಬಂದ ನಂತರ ಮತ್ತೆ ಗಣೇಶಯ್ಯನವರ ಪುಸ್ತಕವನ್ನು ತೆರೆದೆ, ಆಗ ನಾವು ಎರಡು ಸ್ಮಾರಕಗಳನ್ನು ನೋಡಲಾಗಲಿಲ್ಲ ಅಂತ ತಿಳಿಯಿತು. ಒಂದು ಸ್ನಾನ ಘಟ್ಟ ಮತ್ತೊಂದು ದೇವಾಲಯ. ಒಟ್ಟಿನಲ್ಲಿ ನಾಗಾರ್ಜುನಕೊಂಡ ಪ್ರವಾಸವಂತೂ ತುಂಬಾ ವಿಭಿನ್ನವಾದ ಅನುಭವವನ್ನು ಕೊಟ್ಟಿತು. ತೆಲಂಗಾಣದ ಆ ಹಳ್ಳಿಗಾಡಿನ ಪ್ರಕೃತಿ ಸೌಂದರ್ಯದ ಜೊತೆ ಐತಿಹಾಸಿಕ ಸ್ಮಾರಕಗಳ ನೋಟ ಕಣ್ಮನ ತಣಿಸಿತು. ನಾನು ಕೆ.ಎನ್.ಗಣೇಶಯ್ಯನವರಿಗೆ ಇಲ್ಲಿ ಧನ್ಯವಾದಗಳನ್ನು ಹೇಳಲೇಬೇಕು.

.........

Apr 7, 2018

ನಾಗಾರ್ಜುನ ಸಾಗರ ಮತ್ತು ನಾಗಾರ್ಜುನಕೊಂಡ ಪ್ರವಾಸ - ೧

ನನಗೆ ಓದುವ ಹವ್ಯಾಸ... ಕೆಲವು ಆಯ್ದ ಲೇಖಕರ ಪುಸ್ತಕಗಳನ್ನು ಮಾತ್ರ ಓದುತ್ತೇನೆ. ಎಸ.ಎಲ್.ಭೈರಪ್ಪ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ತರಾಸು ಈ ಲೇಖಕರ ಪುಸ್ತಕಗಳನ್ನು ನಾನು ಹೆಚ್ಚಾಗಿ ಓದುವದು. ಬೆಂಗಳೂರಿಗೆ ಹೋದಾಗೆಲ್ಲ ಟೋಟಲ್ ಕನ್ನಡ ಪುಸ್ತಕದಂಗಡಿಗೆ ಹೋಗಿ ನನಗೆ ಬೇಕಾದ ಪುಸ್ತಕಗಳನ್ನು ತಗೊಂಡು ಬರುವದು ಹಾಗೂ ಹೈದೆರಾಬಾದಿನಿಂದ ಆನ್ಲೈನ್ ಖರೀದಿಸುವದು ನನ್ನ ರೂಢಿ. ಹಿಂದಿನ ಸಲ ಬೆಂಗಳೂರಿಗೆ ಹೋದಾಗ ಯಾವುದಾದರು ಬೇರೆ ಲೇಖಕರ ಪುಸ್ತಕಗಳನ್ನು ಓದಿ ನೋಡಬೇಕು ಅಂದುಕೊಂಡು ಅಲ್ಲಿ ಕೆಲಸ ಮಾಡುವ ಒಂದು ಹುಡುಗಿಗೆ ಕೇಳಿದೆ. ಅವಳು ಕೆ.ಎನ್.ಗಣೇಶಯ್ಯನವರ ಪುಸ್ತಕ ಓದಿ, ತುಂಬಾ ಚೆನ್ನಾಗಿರುತ್ತವೆ ಎಂದಳು. ನನ್ನ ಆಯ್ದ ಲೇಖಕರ ಪಟ್ಟಿಯಲ್ಲಿ ಈಗ ಗಣೇಶಯ್ಯನವರ ಹೆಸರು ಕೂಡ ಸೇರಿಕೊಂಡಿತು. ಅವರ ಬರಹ ಇಷ್ಟ ಆಗಿ ಅವರು ಬರೆದಿರುವ ಸುಮಾರು ಪುಸ್ತಕಗಳು ನನ್ನ ಗ್ರಂಥಭಂಡಾರಕ್ಕೆ ಸೇರಿದವು. ಗಣೇಶಯ್ಯನವರ "ಕಲ್ದವಸಿ" ಎನ್ನುವ ಕಥಾಸಂಕಲನವನ್ನು ಓದುತ್ತಿದ್ದಾಗ ಅಲ್ಲಿ ಬರೆದಿದ್ದ ನಾಗಾರ್ಜುನಕೊಂಡ ಎಂಬ ಸ್ಥಳ ನನ್ನ ಗಮನ ಸೆಳೆಯಿತು. ನಾನು ಇದನ್ನು ಸಿದ್ದಿಗೆ ಹೇಳಿದೆ. ಅಲ್ಲಿ ಹೋಗಿ ಬರೋಣ ಎಂದಾಗ ಅವರು ಸರಿ ಎಂದರು. ಇದು ನಮ್ಮ ನಾಗಾರ್ಜುನಕೊಂಡ ಪ್ರವಾಸಕ್ಕೆ ಪೀಠಿಕೆ ಹಾಕಿದ ಕಾರಣ.

ನಾಗಾರ್ಜುನಕೊಂಡಕ್ಕೆ ಹೋಗಲು ಒಂದು ತಿಂಗಳು ಮುಂಚೆಯಿಂದಾನೆ ತಯಾರಿ ನಡೆದಿತ್ತು. ನವಂಬರ್ ತಿಂಗಳಲ್ಲಿಯೇ ನಾಗಾರ್ಜುನ ಸಾಗರದಲ್ಲಿರುವ ವಿಜಯ ವಿಹಾರ ಹೋಟೆಲ್ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದೆವು. ಡಿಸೆಂಬರ್ ೨೪ ನೇ ದಿನದಂದು ನಲಗೊಂಡಕ್ಕೆ ಹೋಗಿ ಅಲ್ಲಿ ಛಾಯಾಸೋಮೇಶ್ವರ ದೇವಾಲಯ ಮತ್ತು ಬಾಲಚಂದ್ರುನಿ ಗುಡ್ಡದ ಮೇಲಿರುವ ದೆವ್ವ ಹುಣಸೆ ಮರ (Baobab tree ) ನೋಡಿ ಅಲ್ಲಿಂದ ನಾಗಾರ್ಜುನಸಾಗರಕ್ಕೆ ಹೋಗಿ ಆ ದಿನ ಎತ್ತಿಪೋತಲ ಜಲಪಾತ ನೋಡಿಕೊಂಡು ಮರಳಿ ಹೋಟೆಲ್ ಗೆ ಬಂದು ವಿಶ್ರಾಂತಿ ತೆಗೆದುಕೊಂಡು ಮಾರನೆಯ ದಿನ ಬೆಳಿಗ್ಗೆ ನಮ್ಮ ಸವಾರಿ ನಾಗಾರ್ಜುನ ಕೊಂಡದತ್ತ ಹೊರಟಿತು.

ನಾಗಾರ್ಜುನಕೊಂಡದ ಬಗ್ಗೆ ಸಣ್ಣ ಮಾಹಿತಿ ಕೊಡಲು ಇಚ್ಛಿಸುತ್ತೇನೆ. ನಾಗಾರ್ಜುನಕೊಂಡ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ನಾಗಾರ್ಜುನಸಾಗರದಲ್ಲಿರುವ ಐತಿಹಾಸಿಕ ಬೌದ್ಧ ಸ್ಥಳ. ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿಯುವ ಕೃಷ್ಣಾ ನದಿಗೆ ಆಣೆಕಟ್ಟನ್ನು ಕಟ್ಟಿದಮೇಲೆ ಬೌದ್ಧ ಪುರಾತತ್ವ ಸ್ಥಳ ನೀರಿನಲ್ಲಿ ಮುಳುಗಿತು. ಆ ನಂತರ ಅದನ್ನು ಅಗೆದು ಎತ್ತರದ ಸ್ಥಳಕ್ಕೆ ವರ್ಗಾಯಿಸಲಾಯಿತು, ಅದೇ ಈಗ ನಾಗಾರ್ಜುನಕೊಂಡ ದ್ವೀಪವಾಗಿದೆ. ಎಷ್ಟೋ ಬೌದ್ಧ ಸ್ಮಾರಕಗಳು ಇಲ್ಲಿ ಪುನರ್ನಿರ್ಮಾಣಗೊಂಡಿವೆ. ೨ನೆ ಶತಮಾನದಲ್ಲಿದ್ದ ಬೌದ್ಧ ಗುರು ನಾಗಾರ್ಜುನರ ಹೆಸರೇ ಈ ಜಾಗಕ್ಕೆ ಬಂದಿದೆ. ಈ ಸ್ಥಳ ಆ ಕಾಲದ ಅತೀ ಶ್ರೀಮಂತ ಬೌದ್ಧ ಸ್ಥಳ. ಇಲ್ಲಿ ಬೌದ್ಧ ಮಠಗಳು, ವಿಶ್ವವಿದ್ಯಾಲಯಗಳು ಎಷ್ಟೊಂದು ಪ್ರಸಿದ್ಧಿ ಹೊಂದಿದ್ದುವೆಂದರೆ ಚೀನಾ, ಶ್ರೀಲಂಕಾ, ಗಾಂಧಾರ, ಬೆಂಗಾಲ ಮುಂತಾದ ಸ್ಥಳಗಳಿಂದ ಬೌದ್ಧ ಸನ್ಯಾಸಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿ ಬರುತ್ತಿದ್ದರಂತೆ. ನಾಗಾರ್ಜುನಕೊಂಡ ಶಾತವಾಹನರ ಉತ್ತರಾಧಿಕಾರಿಗಳಾದ ಇಕ್ಷ್ವಾಕು ರಾಜವಂಶದ ರಾಜಧಾನಿಯಾಗಿತ್ತು.

ದಿನಾಂಕ್ ೨೫/೧೨/೨೦೧೭ ರಂದು ಬೆಳಿಗ್ಗೆ ೮ ಗಂಟೆಗೆ ವಿಜಯ ವಿಹಾರದ ಎದುರಿಗಿರುವ ಸಣ್ಣ ಹೋಟೆಲ್ನಲ್ಲಿ ಇಡ್ಲಿ ತಿಂದು, ನಾಗಾರ್ಜುನಕೊಂಡದಲ್ಲಿ ತಿನ್ನಲು ಸ್ವಲ್ಪ ಇಡ್ಲಿ ಕಟ್ಟಿಸಿಕೊಂಡು ಹಡಗು ನಿಲ್ಲುವ ಸ್ಥಳದತ್ತ ನಡೆದೆವು. ೯.೩೦ ಗೆ ಟಿಕೆಟ್ ಕೊಡಲು ಪ್ರಾರಂಭಿಸಿದರು. ಒಬ್ಬರಿಗೆ ೧೫೦/- ರೂಪಾಯಿಗಳು. ಟಿಕೆಟ್ ತೆಗೆದುಕೊಂಡು ಹಡಗಿನತ್ತ ನಡೆದೆವು. ಆ ಸಮಯದಲ್ಲಿ ಅಷ್ಟೇನು ಗದ್ದಲವಿರಲಿಲ್ಲ.


ತೆಲಂಗಾಣ ಪ್ರವಾಸೋದ್ಯಮದವರು ಎರಡು ಹಡಗನ್ನು ನಾಗಾರ್ಜುನಕೊಂಡಕ್ಕೆ ಹೋರಾಡಲು ಇಟ್ಟಿದ್ದಾರೆ. ಘಂಟೆಗೆ ಒಂದರಂತೆ ಬಾರಿ-ಬಾರಿಯಾಗಿ ಎರಡು ಹಡಗುಗಳು ಹೊರಡುತ್ತವೆ.


ಹಡಗಿನ ಸ್ಥಿತಿ ಚೆನ್ನಾಗಿದ್ದವು... ಕೆಳಗಡೆ ಹವಾ ನಿಯಂತ್ರಣ ಕೊಠಡಿ, ಮೇಲೆ ತೆರೆದ ಛಾವಣಿಯಲ್ಲಿ ಕುರ್ಚಿಗಳನ್ನು ಹಾಕಿ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ನಾವು ಮೇಲೆಯೇ ಹೋದೆವು. ಹಡಗು ಸ್ವಲ್ಪ ಹೊತ್ತಿಗೆ ಜನ ಎಲ್ಲ ಹತ್ತಿದ ಮೇಲೆ ಹೊರಟಿತು.


ಹಡಗು ಹೊರಡುವವರೆಗೆ ಸುಮ್ಮನೆ ಕುಳಿತ ಜನ, ನಂತರ ಎದ್ದು ನಿಂತು ನಿಸರ್ಗದ ಚಲುವನ್ನು ಸವೆಯಲು, ಫೋಟೋ ತೆಗೆದುಕೊಳ್ಳಲು ಶುರು ಮಾಡಿದರು. ನಾನು ಕುಳಿತ ಕಡೆಗೆ ಬಿಸಿಲು ಬರುತ್ತಿದ್ದರಿಂದ ನಂಗೆ ಎಲ್ಲಿ ಇಡ್ಲಿ ಜೊತೆ ತಂದ ಚಟ್ನಿ ಹಳಸುತ್ತೋ ಎನ್ನೊ ಚಿಂತೆ. ನೆರಳಿರುವ ಜಾಗ ನೋಡಿ ನಾನು ಬ್ಯಾಗನ್ನು ಆ ಕಡೆ ತೆಗೆದುಕೊಂಡು ಹೋದೆ. ಹಡಗು ಮುಂದೆ ಹೋದಂತೆ ನೀರಿನಲ್ಲಿ ಮೂಡಿದ ಅದರ ಮಾರ್ಗದ ಗುರುತು ೨ರಿಂದ ೩ ನಿಮಿಷಗಳವರೆಗೂ ಹಾಗೆ ಕಾಣಿಸುತ್ತಿತ್ತು. ನಾನು ಸಣ್ಣ ತೆಪ್ಪದಲ್ಲಿ ಕುಳಿತಿದ್ದೆ, ಮೋಟಾರು ಹಡಗಿನಲ್ಲಿ ಕುಳಿತಿದ್ದು ಮೊದಲ ಬಾರಿ. ಈ ಹೊಸ ಅನುಭವ ನನಗೆ ತುಂಬಾ ಇಷ್ಟವಾಯ್ತು.


ಚಿಕ್ಕ-ಚಿಕ್ಕ ದೋಣಿಗಳಲ್ಲಿ ಮೀನುಗಾರರು ಮೀನು ಹಿಡಿಯಲು ಬಂದಿದ್ದರು. ದೂರಿಂದ ಆ ಬೆಟ್ಟ, ನೀರು, ದೋಣಿ, ಮಂಜು ಎಲ್ಲ ಸೇರಿ ನೋಡುಗರ ಮನ ಸೆಳೆಯುವಂತಿತ್ತು..


ಇದು ಹರಿಯುವ ನೀರಲ್ಲದ್ದರಿಂದ ಹಡಗು ಒಂದೇ ಮಟ್ಟದಲ್ಲಿ ಹೋಗುತ್ತಿತ್ತು. ನೀರನ್ನು ಸೀಳಿಕೊಂಡು ಹಡಗು ಮುಂದೆಹೋಗುವದನ್ನು ನೋಡುತ್ತಾ ನಿಂತುಕೊಂಡೆ.


ಮೀನುಗಾರರಿಗೆ ಸವಾಲಂತೆ ಕಡಲ ಹಕ್ಕಿಗಳು ಕೂಡ ಮೀನುಗಳನ್ನು ಕೆಲವೇ ಕ್ಷಣಗಳಲ್ಲಿ ಹಿಡಿದೊಯ್ಯುತ್ತಿದ್ದವು. ನಾನು ಅವುಗಳನ್ನು ಗಮನಿಸುತ್ತಾ ಕೂತಿದ್ದೆ, ಮೀನು ಯಾವಾಗ ಹಿಡಿಯುತ್ತಿದ್ದವೋ ಗೊತ್ತೇ ಆಗುತ್ತಿರಲಿಲ್ಲ, ಅಷ್ಟೊಂದು ವೇಗದಿಂದ ಕೆಲಸ ಮಾಡುತ್ತಿದ್ದವು. ಮೀನುಗಳು ಕೂಡ ನೀರಿನಿಂದ ಎತ್ತರಕ್ಕೆ ಜಿಗಿದು ಮತ್ತೆ ನೀರಿಗೆ ಧುಮುಕಿ ಮಾಯವಾಗುತ್ತಿದ್ದವು.


೧ ಘಂಟೆಯ ಹಡಗಿನ ಪ್ರಯಾಣದ ನಂತರ ಅಂತೂ ನಾಗಾರ್ಜುನಕೊಂಡ ದ್ವೀಪ ತಲುಪಿದೆವು. ಹಡಗಿನಿಂದ ಇಳಿಯುವಾಗ ಸರಿಯಾಗಿ ೧೧ ಘಂಟೆ. ಹಡಗಿನ ಉಸ್ತುವರ ಒಂದು ಘಂಟೆ ಅಷ್ಟೇ ಸಮಯವಿರೋದು ನೀವು ಬೇಗ ಎಲ್ಲ ನೋಡಿಕೊಂಡು ಇಲ್ಲಿಗೆ ಬಂದುಬಿಡಿ ಎಂದು ಹೇಳಿದನು. ನಮಗೆ ತುಂಬಾ ಕೋಪ ಬಂತು. ಒಂದು ಘಂಟೆಯಲ್ಲಿ ಏನು ನೋಡಲು ಸಾಧ್ಯ ಅಂತ. ಆ ನಂತರ ನಾವು ನಿರ್ಧಾರ ಮಾಡಿದೆವು, ಎಲ್ಲ ನೋಡಿಕೊಂಡು ಕೊನೆಯ ಹಡಗಿಗೆ ಮರಳುವದು ಎಂದು. ಕೊನೆಯ ಹಡಗು ಸಂಜೆ ೪ ಘಂಟೆಗೆ ಎಂದು ತಿಳಿದುಕೊಂಡು ಜಾಗಗಳನ್ನು ನೋಡಲು ಪ್ರಾರಂಭಿಸಿದೆವು.


ನಾಗಾರ್ಜುನಕೊಂಡ ದ್ವೀಪಕ್ಕೆ ಪ್ರವೇಶಿಸುತ್ತಿದ್ದಂತೆ ಬಲಗಡೆಗೆ ಈ ಮಾರ್ಗದರ್ಶಿ ನಕ್ಷೆಯ ಫಲಕವನ್ನು ನಾವು ನೋಡಬಹುದು.


ಪ್ರವೇಶದ ನಂತರ ಸ್ವಲ್ಪ ದೂರ ನಡೆದ ಮೇಲೆ ಎಡಗಡೆ ಈ ಕೆಳಗಿನ ಬುರುಜಿನ ಆಕಾರದ ರಚನೆಯನ್ನುಕಾಣಬಹುದು.. ಕಲ್ಲುಗಳನ್ನು ವೃತ್ತಾಕಾರದಲ್ಲಿ ಜೋಡಿಸಿ ಮೇಲೆ ಹೋದಂತೆ ವೃತ್ತಗಳು ಚಿಕ್ಕವಾಗುತ್ತ ಹೋಗುತ್ತವೆ.


ಕೆಳಗಿನ ಚಿತ್ರದಲ್ಲಿರುವ ಗುಡಿ ಪುನರ್ನಿರ್ಮಾಣಗೊಂಡದ್ದಲ್ಲ. ಇದು ಮೊದಲಿನಿಂದ ಅಲ್ಲಿಯೇ ಇದ್ದ ಹಿಂದೂ ಗುಡಿ. ಚಿತ್ರದಲ್ಲಿರುವ ಹನುಮಂತನ ಮೂರ್ತಿ ಈ ಗುಡಿಯಿಂದ ಸ್ವಲ್ಪ ದೂರದಲ್ಲಿದೆ.


ಮಾರ್ಗ ಮಧ್ಯದಲ್ಲಿ ಕಲ್ಲಿನಲ್ಲಿ ಕೆತ್ತಿದ ಈ ಹಾವಿನ ಚಿತ್ರ ನಮ್ಮನ್ನು ಸೆಳೆಯಿತು. ಸಿದ್ದಿ ನಾಗಾರ್ಜುನಕೊಂಡ ಹೆಸರಿಗೆ ಅನುಗುಣವಾಗಿ ನಾಗರಹಾವಿನ ಚಿತ್ರ ಕೆತ್ತಿದ ಹಾಗಿದೆ ಎಂದು ಹೇಳುತ್ತಿದ್ದರು. ಬಿಸಿಲು ಏರುತ್ತಿತ್ತು... ನಾವು ಕ್ಯಾಪ್ ಹಾಗು ಛತ್ರಿಯನ್ನು ಕಾರಿನಲ್ಲೇ ಮರೆತು ಬಂದಿದ್ದೆವು. ನನಗೆ ಹಂಪೆಗೆ ಹೋದಾಗ ಬಿಸಿಲಿನಲ್ಲಿ ತಿರುಗಾಡಿ ಕಪ್ಪಗೆ ಆಗಿದ್ದು ನೆನಪಿಗೆ ಬಂತು. ಮತ್ತೆ ಕರ್ರಗಾದ್ರೆ ಮತ್ತೆ ೧ ತಿಂಗಳಾದ್ರು ಸಮಯ ತೆಗೆದುಕೊಳ್ಳುತ್ತೆ ಎಂದು ಯೋಚಿಸತೊಡಗಿದ್ದೆ....


ನಾಗಾರ್ಜುನ ಕೊಂಡ ಒಂದು ಕೋಟೆಯಾಗಿತ್ತು ಎನ್ನಲು ಉಳಿದಿರುವ ಅವಶೇಷ ಈ ಕೆಳಗಿನ ಗೋಡೆ.


ಕೆಳಗಿನ ಚಿತ್ರದಲ್ಲಿರುವದು ಮೇಘಾಲಿತ್ ಸಿಸ್ಟ್ ಬರಿಯಲ್(ಬೃಹತ್ ಶಿಲಾ ಸಮಾಧಿ). ಸುತ್ತಲೂ ವೃತ್ತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿ ನಡುವೆ ಗುಂಡಿ ತೋಡಿ ಶವವನ್ನು ಅದರಲ್ಲಿ ಹೂಳುತ್ತಿದ್ದರೆಂದು ಹೇಳಲಾಗುತ್ತದೆ.


ಸಿಂಹಲ ವಿಹಾರವು ಶ್ರೀಲಂಕಾದಿಂದ ಬಂದ ಬೌದ್ಧ ಸನ್ಯಾಸಿಗಳ ಮಠವಾಗಿತ್ತು. ಇಲ್ಲಿರುವ ಎರಡು ಚೈತ್ಯಾಗ್ರಹಗಳು ತುಂಬಾ ಆಕರ್ಷಕವಾದ ವಿನ್ಯಾಸ ಹೊಂದಿವೆ. ಬುದ್ಧನ ಮೂರ್ತಿ ತುಂಬಾ ಎತ್ತರವಾಗಿದ್ದು ಆಗಿನ ಬೌದ್ಧ ಧರ್ಮದ ಶ್ರೀಮಂತಿಕೆಯನ್ನು ಸಾರುತ್ತದೆ. ಇಲ್ಲಿ ನಾವು ಕಂಡ ಮತ್ತೊಂದು ಆಸಕ್ತಿದಾಯಕ ವಸ್ತು ಎಂದರೆ ಚಂದ್ರಶಿಲೆ. ಮಠದಲ್ಲಿ ಸಣ್ಣ ಸಣ್ಣ ಕೊನೆಗಳಿದ್ದು, ಪ್ರಾರ್ಥನೆ ಮಾಡಲು ದೊಡ್ಡ ಸಭಾಂಗಣವಿದೆ.


ಚೈತ್ಯಾಗ್ರಹದಲ್ಲಿರುವ ಬುದ್ಧನ ಮೂರ್ತಿ ... ಹಳೆಯ ಇಟ್ಟಿಗೆಗಳು ಎಷ್ಟೊಂದು ಗಟ್ಟಿಯಾಗಿವೆ ಎಂದರೆ ಹೇಳಲಸಾಧ್ಯ.


ಸಿಂಹಲ ವಿಹಾರ ಉದ್ದೇಶಿಕ ಸ್ತೂಪವೆಂದು ಕರೆಯಲಾಗುವ ಈ ಆಕೃತಿ ನನಗಾಣಿಸಿದಂತೆ ಶಾಬಾದಿ ಕಲ್ಲುಗಳಿಂದ ಮಾಡಿದ್ದು. ಗೋಳಾಕಾರದಲ್ಲಿರುವ ಈ ಸ್ತೂಪದ ಮೇಲ್ಮೈ ಎಷ್ಟೊಂದು ನಯವಾಗಿದೆ ಎಂದರೆ ಆನೆಕಲ್ಲಿನ ಮೇಲೆ ಕೈ ಆಡಿಸಿದಂತಾಗುತ್ತದೆ.


ನಾಗಾರ್ಜುನ ಸಾಗರ ಮತ್ತು ನಾಗಾರ್ಜುನಕೊಂಡ ಪ್ರವಾಸ - 2
.........