Jul 21, 2018

ಬೌದ್ಧ ಮಠ ಮತ್ತು ವಿಶ್ವವಿದ್ಯಾಲಯ, ಅನುಪು

ಇಲ್ಲಿಂದ ಮುಂದುವರೆದಿದೆ.. ನಾಗಾರ್ಜುನ ಸಾಗರ ಮತ್ತು ನಾಗಾರ್ಜುನಕೊಂಡ ಪ್ರವಾಸ - ೨

ಡಿಸೆಂಬರ್ ೨೬, ೨೦೧೭
ನಮ್ಮ ಮೂರನೇ ಹಾಗೂ ಕೊನೆಯ ದಿನ ೨೬ ಡಿಸೆಂಬರ್ ೨೦೧೭ ಅನುಪು ಕಡೆ ಹೊರಟೆವು. ನಾವು ನಾಗಾರ್ಜುನಕೊಂಡದಂತೆ ಅನುಪುದಲ್ಲಿಯೂ ಕೂಡ ಟಿಕೆಟ್ ಪದ್ಧತಿ ಇರಬಹುದೆಂದು ಊಹಿಸಿ ಸ್ವಲ್ಪ ತಡವಾಗಿಯೇ ವಿಜಯವಿಹಾರದಿಂದ ನಡೆದೆವು. ನಾವು ಅನುಪು ತಲುಪಿದಾಗ ಸುಮಾರು ೧೦ ಗಂಟೆ. ಸೂರ್ಯ ಸ್ವಲ್ಪ ಚುರುಕಾಗಿಯೇ ಮೇಲೆದ್ದಿದ್ದ ಆ ದಿನ. ಅಲ್ಲಿ ತಲುಪಿದಾಗ ತಿಳಿಯಿತು ಅನುಪು ಬೆಳಿಗ್ಗೆ ೬.೩೦ಕ್ಕೆ ಪ್ರವಾಸಿಗರಿಗೆ ವೀಕ್ಷಣೆಗಾಗಿ ತೆರೆದುಕೊಳ್ಳುತ್ತದೆ ಎಂದು. ಆಗ ಅಂದುಕೊಂಡೆವು ನಸುಕಿನಲ್ಲಿಯೇ ಎದ್ದು ಬಂದಿದ್ದಾರೆ ಚೆನ್ನಾಗಿರುತ್ತಿತ್ತು ಎಂದು.

ಅನುಪುದಲ್ಲಿ ನೋಡಲು ಪ್ರಮುಖವಾಗಿ ಮೂರೂ ಸ್ಮಾರಕಗಳಿವೆ;
೧. ಬುದ್ಧಿಸ್ಟ್ ಆಶ್ರಮ
೨. ಹರಿತಿ ದೇವಾಲಯ
೩. ಅಂಫಿ ಥಿಯೇಟರ್

ಮೊದಲು ನಾವು ಭೇಟಿ ನೀಡಿದ್ದು ಬುದ್ಧಿಸ್ಟ್ ಆಶ್ರಮಕ್ಕೆ. ತುಂಬಾ ವಿಶಾಲವಾದ ಈ ಆಶ್ರಮದಲ್ಲಿ ನಾವು ಸ್ತೂಪಗಳನ್ನು, ಧ್ಯಾನ ಆಲಯಗಳನ್ನು, ವಸತಿ ಗ್ರಹಗಳನ್ನು, ಹಾಗೂ ಇನ್ನು ಕೆಲವು ಸ್ಮಾರಕಗಳನ್ನು ಕಾಣಬಹುದು.

ಈ ಆಶ್ರಮವನ್ನು ಎರಡು ಮುಖ್ಯ ಭಾಗಗಳಲ್ಲಿ ನೋಡಬಹುದು. ಆಶ್ರಮವನ್ನು ಪ್ರವಾಸಿಗರು ವಿಸ್ತಾರವಾಗಿ ನೋಡಲೆಂದು ಪುನಃರ್ನಿರ್ಮಾಣದ ಸಮಯದಲ್ಲಿ ಕಾಲುದಾರಿಯನ್ನು ನಿರ್ಮಿಸಿದ್ದಾರೆ. ಮೊದಲ ಭಾಗದ ಆಶ್ರಮಕ್ಕೆ ಹೋದಾಗ ಮೊದಲು ಸಿಗುವುದೇ ದೊಡ್ಡ ಸ್ತೂಪ. ಈ ಬಹುಮಟ್ಟದ ಸ್ತೂಪವು ನಾಗಾರ್ಜುನ ಕೊಂಡದಲ್ಲಿ ಇದ್ದ ಸ್ತೂಪದಂತೆಯೇ ಇದೆ, ಆದರೆ ಅಷ್ಟು ದೊಡ್ಡದಿಲ್ಲ. ನನಗನಿಸಿದಂತೆ ಈ ಸ್ತೂಪ ಪೂರ್ತಿಯಾಗಿ ಇಟ್ಟಂಗಿಯಿಂದಲೇ ನಿರ್ಮಿಸಿದ್ದು, ಮೇಲಿನ ಅರ್ಧಭಾಗ ನಾಶಹೊಂದಿ ಕೇವಲ ಬುನಾದಿ ಉಳಿದಿದೆ ಎಂದು.

ಈ ಕೆಳಗಿನ ಚಿತ್ರದಲ್ಲಿರುವದು ನನಗನಿಸಿದಂತೆ ಮೆಡಿಟೇಶನ್ ಅಥವಾ ಧ್ಯಾನ ಗೃಹ ಇರಬಹುದು. ಕೊನೆಯ ಪ್ರವೇಶ ಸ್ಥಳದಲ್ಲಿ ಅರ್ಧ ಚಂದ್ರಾಕೃತಿಯ ಶಾಬಾದಿಕಲ್ಲಿನ ಚಪ್ಪಡಿ ಅದರ ಮೇಲೆ ಸಣ್ಣದಾಗಿ ಕೆತ್ತಿದ ಸುಂದರ ವಿನ್ಯಾಸವಿದೆ.

ಈ  ಚಿತ್ರದಲ್ಲಿರುವದು ಚೈತ್ಯ ಸ್ತೂಪ ಗೃಹ. ಬೌದ್ಧ ಧರ್ಮದ ಅನುಯಾಯಿಗಳು ಮಂತ್ರಗಳನ್ನು ಪಠಿಸುತ್ತ ಈ ನುಣುಪಾದ ಸ್ತೂಪದ ಮೇಲೆ ಕೈಯಿಟ್ಟು ಸುತ್ತಲೂ ತಿರುಗುತ್ತಾರೆ. ಈ ಸ್ತೂಪದ ಮೇಲಿನರ್ಧ ಭಾಗ ನಾಶ ಹೊಂದಿದೆ. ಈ ಚೈತ್ಯಾಗೃಹದ ಮುಂದಿನ ಭಾಗ ಎರಡು ಚೂಪಾದ ಮೂಲೆಗಳನ್ನು ಹೊಂದಿದ್ದು ಹಿಂದಿನ ಭಾಗ ಅರ್ಧ ವೃತ್ತಾಕೃತಿಯಲ್ಲಿ ನಿರ್ಮಿಸಲ್ಪಟ್ಟಿದೆ.
ಮಧ್ಯದಲ್ಲಿ ದೊಡ್ಡದಾದ ಧ್ಯಾನ ಸಭಾಂಗಣದ ಸುತ್ತಲೂ ಇರುವ ಕೋಣೆಗಳನ್ನು ವಸತಿ ಗೃಹಗಳು ಎಂದುಕೊಳ್ಳಬಹುದು. ಕಂಬಗಳನ್ನು ಸಾಲಾಗಿ ಹೊಂದಿರುವ ಈ ಆಶ್ರಮ ಶಿಸ್ತುಬದ್ಧ ರೀತಿಯಲ್ಲಿ ನಿರ್ಮಿಸಿರುವಂತೆ ತೋರುತ್ತದೆ. 
ಒಂದು ಕೊನೆಯಲ್ಲಿ ಒಂದು ವಿಚಿತ್ರವಾದ ರಚನೆಯನ್ನು ಕಾಣಬಹುದು. ನಾನು ಸಿದ್ಧಿಯನ್ನು ಅದೇನೆಂದು ಕೇಳಿದೆ, ಅವರು ಅದು ಶೌಚಾಲಯವಿರಬಹುದು ನೋಡಿದರೆ ಅದೇ ರೀತಿ ಕಾಣುತ್ತದೆ ಎಂದು ಹೇಳಿದರು. ನನಗೇಕೋ ಅದು ಆ ರೀತಿ ಅನಿಸಲಿಲ್ಲ. ಆ ಕಲ್ಲಿನ ರಚನೆಯಲ್ಲಿ ಚಿಕ್ಕದಾದ ತೂತೊಂದನ್ನು ಕಾಣಬಹುದು. ಅಷ್ಟೊಂದು ಚಿಕ್ಕ ರಂದ್ರ ಶೌಚಾಲಯಕ್ಕೆ ಹೇಗೆ ಉಪಯೋಗಿಸುತ್ತಾರೆ ಎಂದು ನಾನು ಯೋಚಿಸತೊಡಗಿದೆ. ನಂತರ ಗಣೇಶಯ್ಯ ಸರ್ ಅವರು ನನಗೆ ಹೇಳಿದರು ಅದು ಭಾರತೀಯ ಶೈಲಿಯ ಶೌಚಾಲಯ ಎಂದು.
ಆಶ್ರಮದ ಮತ್ತೊಂದು ಭಾಗದಲ್ಲಿ ಈ D ಆಕೃತಿಯ ಮೂರು ಅವಶೇಷಗಳನ್ನು ಕಾಣಬಹುದು. ನೋಡಿದರೆ ಏನು ಅರ್ಥವಾಗಲಿಲ್ಲ ಅವೇನಿರಬಹುದೆಂದು. ಬೌದ್ಧ ಧರ್ಮದ ಕುರಿತು ತಿಳುವಳಿಕೆ ಹೊಂದಿದವರಿಗೆ ಬಹುಶ ಗೊತ್ತಾಗಬಹುದು. ಈ ರಚನೆಗಳು ಆಕಾರದಲ್ಲಿ ತುಂಬಾ ಚಿಕ್ಕದಾಗಿವೆ. 
ಈ ಕೆಳಗಿನ ಚಿತ್ರದಲ್ಲಿ ಕಂಡುಬರುವ ಮೆಟ್ಟಿಲುಗಳ ಬದಿಗಳಿಗೆ ಕಲ್ಲಿನಿಂದ ಮಾಡಿದ ವಿನ್ಯಾಸಗಳನ್ನು ನಾವು ಸಾಮಾನ್ಯವಾಗಿ ರಾಜಮನೆತನಗಳ ಕಾಲದ ದೇವಸ್ಥಾನದ ಕಟ್ಟಡಗಲ್ಲಿ ನೋಡಬಹುದು, ವ್ಯತ್ಯಾಸವೆಂದರೆ ಅಲ್ಲಿ ಕೆತ್ತನೆ ಸಿರಿವಂತಿಕೆಯಿಂದ ಕೂಡಿರುತ್ತದೆ. ಈ ತರಹದ ಮೆಟ್ಟಿಲುಗಳ ರಚನೆ ಇಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಗಮನಿಸಿದೆವು.
ಕಂಭಗಳನ್ನೊಳಗೊಂಡ ಪ್ರಾರ್ಥನಾಮಂದಿರ ಅಥವಾ ಧ್ಯಾನಗೃಹದ ನೋಟ. ಕಂಭಗಳು ಸಂಪೂರ್ಣ ಸುಸ್ಥಿತಿಯಲ್ಲಿಲ್ಲ. ಆದರೆ ಇದ್ದ ಅವಶೇಷಗಳ ಮೇಲೆ ಸರಳವಾದ ಕೆತ್ತನೆಯನ್ನು ಕಾಣಬಹುದು.
ಈ ಚಿತ್ರದಲ್ಲಿರುವ ಚಿಕ್ಕ ಸ್ತೂಪ ಆಶ್ರಮದ ಎರಡನೇ ಭಾಗದ ಎದುರಿಗಿದೆ. 
ಹರಿತಿ ದೇವಾಲಯ - ಹರಿತಿ ಎನ್ನುವುದು ನೇಪಾಳದ ಕಠಮಂಡುದಲ್ಲಿರುವ ಸ್ವಯಂಭು ಸ್ತೂಪಕ್ಕೆ ಪ್ರಸಿದ್ಧ ಸಂಪರ್ಕ ಹೊಂದಿದ ಸ್ತ್ರೀ ದೇವತೆಯಾಗಿದೆ. ಹರಿತಿ ಪಂಕಿಕ ಎಂಬ ಮಹಾನ್ ಯಕ್ಷ ಜಂಬಲಾನ ಪತ್ನಿ. ಅವಳು ಅಜಿಮದ್ಯ ಮತ್ತು ಸಿಟಳಮಾಜುವಿನ ಹೆಸರುಗಳಿಂದ ಕೂಡಾ ಹೆಸರುವಾಸಿಯಾಗಿದ್ದಾಳೆ. ಸ್ಥಳೀಯ ಜನರು ಅವಳನ್ನು ಪ್ರಬಲ ದೇವತೆ ಎಂದು ಪರಿಗಣಿಸುತ್ತಾರೆ ಮತ್ತು ಸಮಸ್ಯೆಗಳನ್ನು ಸರಿಪಡಿಸಲು ಮತ್ತು ಪರಿಹರಿಸಲು ಅವಳ ಶಕ್ತಿಯನ್ನು ನಂಬುತ್ತಾರೆ. ಹರಿತಿ ಮೂಲತಃ ಭೀಕರವಾದ ಪ್ರಾಣಿ ಎಂದು ಹೇಳಲಾಗುತ್ತದೆ, ಆಕೆ ತನ್ನ ಕುಟುಂಬದ ಆಹಾರ ನಿರ್ವಹಣೆಗಾಗಿ ಮಕ್ಕಳನ್ನು ಕಡಿಯುತ್ತಿದ್ದಳೆಂದು ಹೇಳಲಾಗುತ್ತದೆ. ಇದರಿಂದ ಕಂಗೆಟ್ಟ ಜನ ಬುದ್ಧನಿಗೆ ಮೊರೆಹೊಕ್ಕು ತಮ್ಮ ಕಷ್ಟವನ್ನು ತೋಡಿಕೊಂಡರು. ಆಗ ಬುದ್ಧ ಅವಳ ಮನಃ ಪರಿವರ್ತನೆ ಮಾಡಿ ಶಾಂತಳನ್ನಾಗಿಮಾಡಿದನೆಂದು ಹೇಳಲಾಗುತ್ತದೆ. ಅಲ್ಲಿಂದ ಅವಳು ಬೌದ್ಧ ಸಿದ್ಧಾಂತದ ರಕ್ಷಕಳಾದಳೆಂದು ಅವಳ ಪೂಜೆ ಮಾಡಲಾಗುತ್ತದೆ.

ಈ ದೇವಾಲಯದ ಕಂಭಗಳೊಂದಿಗೆ ಅಡಿಪಾಯ ಮಾತ್ರ ನಾವು ಇಲ್ಲಿ ನೋಡಬಹುದು. ಇಲ್ಲಿನ ಉತ್ಖನನದಲ್ಲಿ ಮುಂಡವನ್ನು ಸಹ ಪಡೆಯಲಾಯಿತು ಎಂದು ಫಲಕದಲ್ಲಿ ಬರೆದಿದ್ದಾರೆ. ಈ ಹರಿತಿ ಹೆಸರಿನಲ್ಲೇ ಆಂಧ್ರ ಪ್ರವಾಸೋದ್ಯಮದವರು ಅತಿಥಿಗೃಹಗಳನ್ನು ನಡೆಸುತ್ತಿದ್ದಾರೆ.

ಖಾಲಿ ಖಾಲಿ ರಸ್ತೆ, ಬದಿಯಲ್ಲಿ ಬಣ್ಣ-ಬಣ್ಣದ ಹೂವಿನ ಮರಗಳು, ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಅನುಪು ವಿಜಯಪುರಿಯಿಂದ ಉತ್ತರಕ್ಕೆ ಸುಮಾರು ೨೨ ಕಿ ಮೀ ದಷ್ಟು ದೂರದಲ್ಲಿದೆ. ಆದರೆ ಅಲ್ಲಿಗೆ ಹೋಗುವ ರಸ್ತೆ ತುಂಬಾ ಸುಂದರವಾಗಿದೆ. ನಸುಕಿನಲ್ಲಿ ಅನುಪು ನೋಡಲು ಹೋಗುವದೇ ಕಣ್ಣಿಗೊಂದು ಹಬ್ಬ.
ಅಂಫಿಥಿಯೇಟರ್ (ತೆರೆದ ಸಭಾಂಗಣ) - ಕೊನೆಯದಾಗಿ ನಾವು ತೆರೆದ ಸಭಾಂಗಣ ನೋಡಲು ಹೊರಟೆವು. ಬಿಸಿಲು ಸ್ವಲ್ಪ ಚುರುಕಾಗಿಯೇ ಇತ್ತು. ಕಾರನ್ನು ಅಲ್ಲೇ ರಸ್ತೆಯ ಪಕ್ಕದಲ್ಲೇ ಒಂದು ಚಿಕ್ಕ ಮರದ ಕೆಳಗೆ ನಿಲ್ಲಿಸಿ ನಡೆದುಕೊಂಡೇ ಹೊರಟೆವು.

ಸಭಾಂಗಣವು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ದೊಡ್ಡದಾಗಿಯೇ ಇತ್ತು. ನಾಗಾರ್ಜುನಕೊಂಡದಲ್ಲಿ ಕಂಡ ದೊಡ್ಡದಾಗಿರುವ ಇಟ್ಟಿಗೆ ಹಾಗೂ ಶಾಬಾದಿ ಕಲ್ಲುಗಳಿಂದ ಬಹುಮಟ್ಟದ ಈ ಸಭಾಂಗಣವು ಮಾಡಲ್ಪಟ್ಟಿದೆ. ಅಲ್ಲಿಯೇ ಹಾಕಿರುವ ಒಂದು ಫಲಕದಲ್ಲಿ ಈ ರೀತಿ ವಿಷಯ ಪ್ರಸ್ತಾಪನೆಯಿತ್ತು ;
"ಈ ಸ್ಥಳಾಂತರಿಸಲ್ಪಟ್ಟ ರಚನೆಯು ನಾಲ್ಕು ಕಡೆಗಳಲ್ಲಿ ಬಹು ಶ್ರೇಣೀಕೃತ ಗ್ಯಾಲರಿಯನ್ನು ಹೊಂದಿರುತ್ತದೆ ಮತ್ತು ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುತ್ತದೆ. ಇದು ಪುರಾತನ ಭಾರತದ ವಾಸ್ತುಶೈಲಿಯ ವಿಶಿಷ್ಟವಾದ ಉದಾಹರಣೆಯಾಗಿದೆ ಮತ್ತು ಬಹುಶಃ ರೋಮನ್ ಸಂಪ್ರದಾಯದಿಂದ ಸ್ಫೂರ್ತಿಯಾಗಿದೆ. ಆದರೂ, ಸಾಮಾನ್ಯ ರೋಮನ್ ಮಾದರಿಗಿಂತ ಭಿನ್ನವಾಗಿ ಇದು ಆಯತಾಕಾರದ ಪ್ರದೇಶವನ್ನು 16.46 x 13.72 ಮೀ ಆವರಿಸಿದೆ. ಅಂಡಾಕಾರದ ಬದಲಿಗೆ. ಇಟ್ಟಿಗೆ ನಿರ್ಮಾಣದ ರಚನೆಯು ಸಂಪೂರ್ಣವಾಗಿ ಕಲ್ಲಿನ ಚಪ್ಪಡಿಗಳಿಂದ ಮುಚ್ಚಿಹೋಗಿದೆ, ಕನಿಷ್ಟ ಹದಿನಾರು ಹಂತಗಳನ್ನು ಹೊಂದಿದೆ.ನಾಗರ್ಜುನಕೊಂಡದಿಂದ ಕುಸ್ತಿ ದೃಶ್ಯಗಳ ಹಲವಾರು ಗ್ರಂಥಾತ್ಮಕ ನಿರೂಪಣೆಗಳು ದೃಢೀಕರಿಸಿದಂತೆ ಈ ಸ್ಥಳವನ್ನು ಕ್ರೀಡಾ ಮತ್ತು ಕುಸ್ತಿಯಲ್ಲಿ ಬಳಸಬಹುದಾಗಿತ್ತು."

ಸಭಾಂಗಣವು ಪಶ್ಚಿಮಕ್ಕೆ ಎದುರಾಗಿರುವ ಇಳಿಜಾರಿನೊಂದಿಗೆ, ಪೂರ್ವ-ಪಶ್ಚಿಮಕ್ಕೆ ಹೊಂದಿಕೊಂಡಿದೆ. ಸಾಮಾನ್ಯವಾಗಿ ಕಾರ್ಯಕ್ರಮಗಳು ದಿನದ ದ್ವಿತೀಯಾರ್ಧದಲ್ಲಿ ನಡೆಯುತ್ತವೆ, ಆದ್ದರಿಂದ ಸೂರ್ಯಾಸ್ತದವರೆಗೆ ಬೆಳಕು ಇರುತ್ತದೆ.
ಮೆಟ್ಟಿಲುಗಳನ್ನೇರಿ ಮೇಲಕ್ಕೆ ಬಂದರೆ ಅಲ್ಲಿ ಚಿಕ್ಕ ಚಿಕ್ಕ ಕೋಣೆಗಳ ರಚನೆಯ ಅವಶೇಷಗಳನ್ನು ಕಾಣಬಹುದು. ನನಗನಿಸಿದಂತೆ ವಿಶ್ರಾಂತಿ ಪಡೆಯಲು ಆ ಕೋಣೆಗಳನ್ನು ಮಾಡಿರಬಹುದೆಂದೆನಿಸುತ್ತದೆ.

ಅಲ್ಲಿಂದ ಇನ್ನು ಸ್ವಲ್ಪ ಮೇಲಕ್ಕೆ ಹೋದರೆ ಕಂಭಗಳನ್ನೊಳಗೊಂಡ ಒಂದು ಕಟ್ಟಡದ ಅವಶೇಷವನ್ನು ನೋಡಬಹುದು. ನೋಡಲು ಹರಿತಿ ದೇವಾಲಯದ ಅವಶೇಷದಂತಿರುವದರಿಂದ ನನಗನಿಸಿದಂತೆ ಅದು ಕೂಡ ಹರಿತಿ ದೇವಾಲಯವಿರಬಹುದು. ಕಾರ್ಯಕ್ರಮದ ಮೊದಲಿಗೆ ಪೂಜೆ ಮಾಡಲು ಅಲ್ಲಿ ನಿರ್ಮಿಸಲಾಗಿದೆ ಎನ್ನಬಹುದು.

ಆ ದಿನ ನೋಡುವದೇನು ಬಹಳ ಇಲ್ಲದಿದ್ದರೂ ಬಿಸಿಲಿಗೆ ಅರ್ಧ ಸುಸ್ತಾಗಿದ್ದೆವು. ಮೂರು ದಿನದ ಈ ಪ್ರವಾಸದಿಂದ ಬಳಲಿದ್ದರು, ಈ ಸ್ಥಳಗಳನ್ನು ನೋಡಿದ್ದ ಸಂತೋಷದಿಂದ ವಿಜಯವಿಹಾರದತ್ತ ಹೊರಟೆವು.

ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ;
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ;
ಕಾಲ ಮೇಲೆ ಕೈಯನೂರಿ, ಕೋಲ ಹಿಡಿಯದ ಮುನ್ನ;
ಮುಪ್ಪಿಂದೊಪ್ಪವಳಿಯದ ಮುನ್ನ;ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ.

ನಮ್ಮ ಸಿದ್ದನ ಕೂಡಲ ಸಂಗಮದೇವ ಈ ಹಳೆ ಕೋಟೆ-ಕೊತ್ತಲುಗಳಲ್ಲಿ, ದೇವಾಲಯಗಳಲ್ಲಿ,  ರಂಗಭೂಮಿಗಳಲ್ಲಿ , ಮರಗಳಲ್ಲಿ, ಗೋಪುರಗಳಲ್ಲಿ, ಗೋರಿಗಳಲ್ಲಿ ಇರುವದರಿಂದ ಇದನ್ನೇ ಸುಮಾರು ಹತ್ತು ವರ್ಷಗಳಿಂದ ಪೂಜೆ ಮಾಡುತ್ತಾ ಏನು ಪ್ರತಿಫಲ ಬಯಸದೆ ಇವುಗಳ ಕುರಿತು ಬರೆದು ಮಾಹಿತಿ ನೀಡುತ್ತಾ ಬಂದಿದ್ದಾರೆ. ತುಂಬಾ ಪ್ರಯತ್ನ, ಶ್ರದ್ಧೆ, ತಾಳ್ಮೆ ಈ ಕೆಲಸಕ್ಕೆ ಬೇಕಾಗುತ್ತದೆ ಎಂದು ಈಗ ತಿಳಿಯುತ್ತಿದೆ.


ಈ ರೀತಿ ಶ್ರೀ.ಕೆ.ಎನ್.ಗಣೇಶಯ್ಯನವರ ಪುಸ್ತಕದಿಂದ ಶುರುವಾದ ನಮ್ಮ ಪ್ರವಾಸ, ಮೂರು ದಿನಗಳ ಅವಧಿಯ ನಂತರ ಹೈದೆರಾಬಾದಿಗೆ ಮರಳುವದರ ಜೊತೆಗೆ ಕೊನೆಗೊಂಡಿತು.
.........

No comments: