May 4, 2019

ಬೀದರ್ ಕಿಲ್ಲಾ

ಬೀದರಿನ ಇತಿಹಾಸ ತುಂಬಾ ಹಳೆಯದು. ಬೀದರ್ ಎಂಬ ಹೆಸರು ಬಿದಿರು (Bamboo) ಇಂದ ಬಂತು ಎಂದು ಹೇಳಲಾಗುತ್ತದೆ. ಇಲ್ಲಿ ತುಂಬಾ ಮೊದಲು ಬಿದಿರಿನ ಕಾಡಿತ್ತು  ಆದ್ದರಿಂದ ಈ ಸ್ಥಳಕ್ಕೆ ಬೀದರ್ಕೋಟೆ  ಎಂದು ಕರೆಯುತ್ತಿದ್ದರೆಂದು ನಂತರದಲ್ಲಿ ಇದು ಬೀದರ್ ಎಂದಾಯಿತೆಂದು ಹೇಳಲಾಗುತ್ತದೆ.
ಸೆಪ್ಟೆಂಬರ್ ೩, ೨೦೧೮ ರಂದು ಬೆಳಿಗ್ಗೆ ಬೀದರ್ ಕೋಟೆ ನೋಡಲು ಹೊರಟೆವು. ಬೆಳಿಗ್ಗೆ ಬೇಗ ಹೋದರೆ ಬಿಸಿಲಿರುವದಿಲ್ಲ ಆರಾಮಾಗಿ ಸುತ್ತಾಡಬಹುದೆಂದು ಸ್ವಲ್ಪ ಬೇಗನೆ ಬಿಟ್ಟೆವು. ಆದರೆ ಅಲ್ಲಿ ಹೋದ ನಂತರ ತಿಳಿಯಿತು ಕೋಟೆ ಒಳಗೆ ಹೋಗಲು ಪ್ರವಾಸಿಗರಿಗೆ ಈಗ ಸಮಯವನ್ನು ಗೊತ್ತು ಪಡಿಸಿದ್ದಾರೆ. ಸಮಯ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಪ್ರವಾಸಿಗರಿಗೆ ಕೋಟೆ ನೋಡಲು ಅನುಮತಿ ಇದೆ. ಆದ್ದರಿಂದ ಅಲ್ಲಿಂದ ಬೇರೆ ಐತಿಹಾಸಿಕ ಸ್ಥಳ ಚೌಖಂಡಿ ನೋಡಿಕೊಂಡು ಮರಳಿ ಬಂದು ಕೋಟೆ ನೋಡೋಣವೆಂದು ಹೊರಟೆವು. ನಾವು ಮರಳಿ ಬಂದಾಗ ಸಮಯ ಸುಮಾರು ೧೦ ಗಂಟೆ ಆಗಿರಬಹುದು. ಅಷ್ಟೋತ್ತಿಗಾಗಲೇ ಸೂರ್ಯ ಮೇಲೇರಿದ್ದರಿಂದ ಬಿಸಿಲು ಏರುತ್ತಿತ್ತು. ಮೊದಲು ವಾಹನಗಳನ್ನು ಒಳಗಡೆ ಬಿಡುತ್ತಿದ್ದರು ಆದರೆ ಈಗ ಬಿಡುವದಿಲ್ಲ. ಆದ್ದರಿಂದ ಕಾರನ್ನು ಹೊರಗೆ ನಿಲ್ಲಿಸಿ ಕಾಲ್ನಡಿಗೆಯಲ್ಲೇ ಬೀದರ್ ಕೋಟೆ ನೋಡಲು ಆರಂಭಿಸಿದೆವು.
ಕೆಳಗಿನ ಚಿತ್ರದಲ್ಲಿ ಕಾಣಿಸುತ್ತಿರುವದು ಬೀದರ್ ಕೋಟೆಯ ಪ್ರವೇಶದ ಮುಖ್ಯ ದ್ವಾರ. ಈ ಹೆಬ್ಬಾಗಿಲಿನ ಮೇಲೆ ಒಂದು ಬೋರ್ಡ್ ನೇತಾಡುತ್ತಿರುವದು ಕಾಣಿಸುತ್ತದೆ. ಅದರಲ್ಲಿ ಬೀದರ್ ಕೋಟೆ ನೋಡಲು ಪ್ರವಾಸಿಗರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾವಾಗಲಾದರೂ ನೋಡಬಹುದೆಂದು ಆದರೆ ನಾವು ಬೆಳಿಗ್ಗೆ ಬಂದಾಗ ೯ ಗಂಟೆಗೆ ತೆರೆದುಕೊಳ್ಳುತ್ತದೆ ಸ್ಥಳೀಯರಿಗೆ ಮಾತ್ರ ಮಾರ್ನಿಂಗ್ ವಾಕ್ ಗೆ ಅನುಮತಿ ಇದೆ, ಪ್ರವಾಸಿಗರಿಗಲ್ಲ ಎಂದು ಸೆಕ್ಯೂರಿಟಿ ಸ್ವಲ್ಪ ಒರಟಾಗೆ ಹೇಳಿದ್ದ. ನನಗೆ ಇಲ್ಲದ ಕೋಪ ಬಂತು. ಅವನಿಗೆ ಸರಿಯಾಗಿ ಮಾತನಾಡಲು ಹೇಳಿ ನಮ್ಮ ಕೆಲಸ ಮುಂದುವರೆಸಿದ್ದೆವು. ನನಗಾಣಿಸಿದಂತೆ ನಮ್ಮ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಅಷ್ಟೊಂದು ಪ್ರಾಮುಖ್ಯತೆ ಸಿಗುತ್ತಿಲ್ಲ. ಬೇರೆ ದೇಶಕ್ಕೆ ಹೋಲಿಸಿದಾಗ ನಮ್ಮ ದೇಶದಲ್ಲೇ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಪ್ರವಾಸೋದ್ಯಮಕ್ಕೆ ಸ್ವಲ್ಪ ಒತ್ತು ಕೊಟ್ಟರೆ ಸಾಕು ದೇಶದ ಆರ್ಥಿಕ ಸ್ಥಿತಿ ಇನ್ನು ಸುಧಾರಿಸುತ್ತದೆ.
ಕೋಟೆಯ ಹೊರಬದಿ ಸುತ್ತಲೂ ಕಂದಕವನ್ನು ಕಾಣಬಹುದು. ಕೋಟೆಯ ಸುರಕ್ಷತೆಯ ಮೊದಲನೇ ಹಂತ ಇದು. ಈ ಕಂದಕದಲ್ಲಿ ನೀರು ತುಂಬಿ ಮೊಸಳೆಗಳನ್ನ ಬಿಡುತ್ತಿದ್ದರೆಂದು ಹೇಳಲಾಗುತ್ತದೆ.
ಇನ್ನು ಬೀದರ್ ಆಳಿದ ರಾಜಮನೆತನದ ಕುರಿತು ಹೇಳಬೇಕೆಂದರೆ ಬೀದರಿನ ಇತಿಹಾಸ ನಮ್ಮನ್ನು ಸುಮಾರು ಕ್ರಿ.ಶ.೨೩೦ ಕ್ಕೆ ಕೊಂಡೊಯ್ಯುತ್ತದೆ. ಆ ಸಮಯದಲ್ಲಿ ದಕ್ಷಿಣದಲ್ಲಿ ಶಾತವಾಹನ ರಾಜಮನೆತನ ಆಳುತ್ತಿತ್ತು. ಆ ಸಮಯದಿಂದ ಬೀದರನ್ನು ಕದಂಬ, ಚಾಲುಕ್ಯ, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಯರು, ಕಾಕತೀಯರು ಆಳಿದರು. ಕ್ರಿ.ಶ. ೧೨೭೦ ರಲ್ಲಿ ದೇವಗಿರಿಯ ಯಾದವರು ಕಾಕತೀಯರನ್ನು ಸೋಲಿಸಿ ಬೀದರನ್ನು ವಶಪಡಿಸಿಕೊಂಡರು. ನಂತರ ಮುಸ್ಲಿಂ ದೊರೆ ಅಲ್ಲಾವುದ್ದೀನ ಖಿಲ್ಜಿಯಿಂದ ಕ್ರಿ.ಶ. ೧೩೧೭ ರಲ್ಲಿ ಸಂಪೂರ್ಣವಾಗಿ ಸೋತ ಯಾದವರು ಬೀದರನ್ನು ಸುಲ್ತಾನರ ವಶಕ್ಕೆ ಒಪ್ಪಿಸಿದರು. ನಂತರ ಮೊಹಮದ್ ಬಿನ್ ತುಘಲಕ್ ನ ಆಳ್ವಿಕೆಗೆ ಬೀದರ್ ಪ್ರಾಂತ್ಯವು ಒಳಪಟ್ಟಿತು. ದಕ್ಷಿಣದಲ್ಲಿ ಕ್ರಿ.ಶ.೧೩೪೭ ರಲ್ಲಿ ತುಘಲಕ್ ನ ರಾಜ್ಯಪಾಲನಾದ ಹಸನ್ ಗಂಗೂ ತನ್ನ ಸ್ವಾತಂತ್ರವನ್ನು ಘೋಷಿಸಿಕೊಂಡ ನಂತರ ಬೀದರ್ ಪ್ರಾಂತ್ಯ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತು. ಹಾಗೂ ಪ್ರಾಂತೀಯ ಆಡಳಿತ ಕೇಂದ್ರವಾಗಿ ಬೀದರ್ ಬೆಳೆಯಿತೆಂದು ಇತಿಹಾಸವಿದೆ.

ಎಲ್ಲ ಕೋಟೆಗಳಂತೆ ಈ ಕೋಟೆಯ ಪ್ರವೇಶವು ಕೂಡ ಅಂಕು ಡೊಂಕು ದಾರಿಯಿಂದ ಕೂಡಿದ್ದು ಮುಂದೆ ಎರಡನೇ ಪ್ರವೇಶ ದ್ವಾರ ಕಾಣಸಿಗುತ್ತದೆ. ಇದು ಕೋಟೆ ಸುರಕ್ಷತೆಯ ಎರಡನೇ ಹೆಜ್ಜೆ. ಎರಡನೇ ಪ್ರವೇಶ ದ್ವಾರದ ಮೇಲೆ ಎರಡು ಚಿಕ್ಕ ಕೋಣೆಗಳನ್ನು ಕಾಣಬಹುದು. ಹಾಗೂ ಬಾಗಿಲ ಬಳಿಯೇ ಒಂದು ಚಿಕ್ಕ ದ್ವಾರಪಾಲಕ ಅಥವಾ ಸೈನಿಕನ ಕೋಣೆಯನ್ನು ಕಾಣಬಹುದು. ಈ ಕೋಟೆ ತುಂಬಾ ಹಳೆಯ ಇತಿಹಾಸವನ್ನು ಹೊಂದಿದ್ದರೂ ಕೂಡ ಈಗಲೂ ಕೋಟೆಯು ತಕ್ಕಮಟ್ಟಿಗೆ ಸುಸಜ್ಜಿತವಾಗೇ ಇದೆ.

ಎರಡನೇ ಬಾಗಿಲನ್ನು ದಾಟಿ ಒಳಗೆ ಹೋದರೆ ಅದೇ ಅಂಕು ಡೊಂಕು ದಾರಿ ಮುಂದುವರೆದು ಎರಡು ಬದಿಯಲ್ಲಿ ಕಲ್ಲಿನ ಗೋಡೆಗಳು ಹಾಗೂ ಅಲ್ಲಲ್ಲಿ ಸೈನಿಕರು ಎತ್ತರದಲ್ಲಿ ನಿಂತು ಕೋಟೆ ಕಾಯಲು ಕಾವಲು ಕಟ್ಟೆಗಳನ್ನು ನೋಡಬಹುದು. ಆ ಎರಡು ಬದಿಯ ಗೋಡೆಗಳಾಚೆ ಕಂದಕವನ್ನು ಮೂರೂ ಭಾಗಗಳಾಗಿ ಮಾಡಿದ್ದಾರೆ. ಕೋಟೆ ರಕ್ಷಣೆಗೆ ಮಾಡಿದ ಈ ವಿಧಾನ ನಿಜವಾಗಿಯೂ ಗಣನೀಯ.

ಕಾವಲು ಕಟ್ಟೆಯ ಮೇಲೆ ಹತ್ತಿ ನಿಂತು ನೋಡಿದಾಗ ಕಾಣುವ ಕಂದಕದ ಚಿತ್ರ. ಕಂದಕದ ಈ ಮೂರೂ ಭಾಗಗಳಲ್ಲಿ ನೀರು ಹರಿಯುತ್ತಿದ್ದು, ಅದರೊಳಗೆ ಮೊಸಳೆಗಳಂತಹ ಜಲಚರಗಳನ್ನು ಕೋಟೆಯ ರಕ್ಷಣೆಯ ಉದ್ದೇಶದಿಂದ ಸಾಕಲಾಗಿತ್ತು.

ಬಹಮನಿ ರಾಜನಾದ ಅಲ್ಲಾ-ಉದ್-ದಿನ್ ಬಹಮನಿ ಬೀದರ್ ಕೋಟೆಯನ್ನು ಪುನರ್ನಿರ್ಮಾಣ ಮಾಡಿ ಕ್ರಿ.ಶ.೧೪೨೯ ರಲ್ಲಿ ತಮ್ಮ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ಗೆ ಸ್ಥಳಾಂತರಿಸಿದರು. ೧೪೫೩ ರಲ್ಲಿ ಮುಸ್ಲಿಂ ವಿದ್ವಾಂಸ ಹಾಗೂ ಪರ್ಷಿಯನ್ ವ್ಯಾಪಾರಿಯಾದ ಮಹಮದ್ ಗವಾನರು ಬಿದರಿಗೆ ಬಂದು ಬಹಮನಿ ಸುಲ್ತಾನ್ ಮಹಮದ್ |||  ನ ಆಡಳಿತಾವಧಿಯಲ್ಲಿ ಮಂತ್ರಿಯಾಗಿ ನೇಮಕಗೊಂಡರು. ಅಲ್ಲದೆ ಅನೇಕ ಸ್ಥಳದ ಗವರ್ನರ್ ಆಗಿದ್ದರು ಕೂಡ.ಈ ಸಮಯದಲ್ಲಿ ಬಹಮನಿ ಸುಲ್ತಾನ ವಿಜಯನಗರದಿಂದ ಗೋವಾ ಪ್ರಾಂತ್ಯವನ್ನು ವಶಪಡಿಸಿಕೊಂಡನು, ರಾಜ್ಯ ವಿಸ್ತರಣೆಯಾಯಿತು, ಅನೇಕ ಆಡಳಿತಾತ್ಮಕ ಸುಧಾರಣೆಗಳಾದವು , ಆದಾಯ ಹೆಚ್ಚಿತು, ಎಷ್ಟೋ ಪ್ರಾಂತ್ಯಗಳು ನೇರವಾಗಿ ಮಹಮದ್ ಗವಾನನ ಅಡಿಯಲ್ಲಿ ನಿಯಂತ್ರಿಸಲಾಯಿತು, ಮದ್ರಸ ಹಾಗೂ ಮಸೀದಿಗಳ ನಿರ್ಮಾಣಗೊಂಡವು, ಈ ಎಲ್ಲ ಬೆಳವಣಿಗೆ ಹಾಗೂ ಗವಾನನ ಬೆಳವಣಿಗೆಯಿಂದ ಸ್ಥಳೀಯರಿಗೆ ಹೊಟ್ಟೆಕಿಚ್ಚು ಮೂಡಿ, ಗವಾನ ಎಲ್ಲಿಂದಲೋ ಬಂದು ಎಲ್ಲ ಆಡಳಿತವು ಆತನಲ್ಲಿಯೇ ಕೇಂದ್ರೀಕೃತವಾಗುತ್ತಿದೆಯೆಂದು, ಆತನ ವಿನಾಶಕ್ಕೆ ಒಳಸಂಚು ಮಾಡಿ, ಒಂದು ಖಾಲಿ ಪುಟದ ಮೇಲೆ ಗವಾನನ ಅಚ್ಚೊತ್ತಿಸಿಕೊಂಡು ಅದರಲ್ಲಿ ಬಹಮನಿ ಸುಲ್ತಾನನ ಮೇಲೆ ಆಕ್ರಮಣ ಮಾಡಲು ಒರಿಸ್ಸಾದ ರಾಜನಿಗೆ ಪತ್ರ ಬರೆದು ಅದನ್ನು ಸುಲ್ತಾನನ ಕೈ ಸೇರುವಂತೆ ಮಾಡುತ್ತಾರೆ. ಸುಲ್ತಾನ ಕುಡಿದ ಮತ್ತಿನಲ್ಲಿ ೧೪೮೧ ಏಪ್ರಿಲ್ ೫ ರಂದು ಮಹಮದ್ ಗವಾನನ ಶಿರಚ್ಛೇದನ ಮಾಡಿಸುತ್ತಾನೆ. ನಂತರ ತಾನು ಮಾಡಿದ್ದು ತಪ್ಪೆಂದು ಅರಿತು ಅತೀವ ಕುಡಿತಕ್ಕೊಳಗಾಗಿ ಒಂದು ವರ್ಷದಲ್ಲೇ ತಾನು ಸಾವಿಗೀಡಾಗುತ್ತಾನೆ.

ಮಹಮದ್ ಗವಾನನ ಸಾವಿನ ೧೦ ವರ್ಷಗಳೊಳಗೆ ಬಹಮನಿ ಸಾಮ್ರಾಜ್ಯವು ಸಣ್ಣ ಸಣ್ಣ ತುಕಡಿಗಳಲ್ಲಿ ಮುರಿದುಹೋಯಿತು. ೧೪೯೦ ರಲ್ಲಿ ವಿಜಾಪುರದ ಆದಿಲ್ ಶಾಹಿ, ಅಹಮದ್ ನಗರನ ನಿಜಾಮ್ ಶಾಹಿ, ಆಚಲ್ಪುರ್ ಗವೀಲ್ಗಡ್ ನ ಬೇರಾರ್ ಶಾಹಿ / ಇಮಾದ್ ಶಾಹಿ ಬಹಮನಿ ಸುಲ್ತಾನರಿಂದ ಬೇರ್ಪಟ್ಟು ತಮ್ಮ ಸ್ವಾತಂತ್ರವನ್ನು ಘೋಷಿಸಿಕೊಂಡರು. ಉಳಿದ ಬಹಮನಿ ಸಾಮ್ರಾಜ್ಯ ಆಗಿನ ಮಿರ್ ಜುಮ್ಲಾ ಆಗಿದ್ದ ಕಾಸಿಂ ಬರೀದ್ ನ ಆಡಳಿತಕ್ಕೊಳಪಟ್ಟಿತು. ಮಹಮೂದ್ ಶಾಹ್ ಬಹಮನಿ ಕೇವಲ ಅಧಿಕಾರದೊಂದಿಗೆ ಔಪಚಾರಿಕ ರಾಜನಾಗಿದ್ದನು. ೧೫೧೮ ರಲ್ಲಿ ಮಹ್ಮುದ್ ಷಾ ಬಹಾಮಾನಿ ಮರಣದ ನಂತರ ಬಹಮನಿ ಸುಲ್ತಾನರ ಮತ್ತೊಂದು ಭಾಗವು ಪ್ರತ್ಯೇಕಿಸಲ್ಪಟ್ಟಿತು, ಗೋಲ್ಕೊಂಡಾದ ಕುತುಬ್ ಷಾ ಅವರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು ಮತ್ತು ಅಮೀರ್ ಬರಿದ್ ಅವರು ಪ್ರಾಯೋಗಿಕವಾಗಿ ಬೀದರ್ ರಾಜರಾದರು ನಂತರ ಬೀದರ್ ಬರಿದ್ ಶಾಹಿಯ ರಾಜಧಾನಿಯಾಯಿತು.

ಭಾರತೀಯ ಇತಿಹಾಸದಲ್ಲಿ ಈ ಐದು ರಾಜವಂಶಗಳನ್ನು ಡೆಕ್ಕನ್ ಸುಲ್ತಾನರು ಎಂದು ಕರೆಯಲಾಗುತ್ತದೆ ಮತ್ತು ಬೀದರ್ ಅವರ ಪ್ರತ್ಯೇಕತೆಯ ಸಾಕ್ಷಿಯಾಗಿತ್ತು. ಈ ಐವರು ಪರಸ್ಪರರ ನಡುವೆ ಘರ್ಷಣೆಗಳನ್ನು ಎದುರಿಸುತ್ತಿದ್ದುದರಿಂದ ೧೫೬೫ ರವರೆಗೆ ವಿಜಯನಗರವು ಪ್ರಬಲವಾಯಿತು. ಇದನ್ನರಿತ ಐದು ಮನೆತನಗಳು ಒಂದಾಗಿ ವಿಜಯನಗರವನ್ನು ಸೋಲಿಸಿದವು ಮತ್ತು ನಾಶಗೊಳಿಸಿದವು, ನಂತರದಲ್ಲಿ ಆದಿಲ್ ಶಾಹಿ ಹೆಚ್ಚು ಶಕ್ತಿಯುತ ಮನೆತನವಾಗಿ ಹೊರಹೊಮ್ಮಿತು ಮತ್ತು ೧೬೧೯ ರಲ್ಲಿ ಬರೀದ್ ಶಾಹಿ ಮನೆತನದ ಆಡಳಿತವನ್ನು ಕೊನೆಗೊಳಿಸುವದರ ಮೂಲಕ ಬೀದರ್ ಅನ್ನು ಸ್ವಾಧೀನಪಡಿಸಿಕೊಂಡಿತು.

ಬೀದರ್ ಕೋಟೆಯ ಹೆಬ್ಬಾಗಿಲು ದಾಟಿ ಒಳಗೆ ಹೋದ ನಂತರ ಎಡಗಡೆ ನಮಗೆ ಈ ಕೆಳಗಿನ ಕಟ್ಟಡ ಕಾಣಸಿಗುತ್ತದೆ. ಈ ಕಟ್ಟಡದ ಒಳಹೋಗದಂತೆ ಕಬ್ಬಿಣದ ಕಂಬಿಗಳಿಂದ ಮುಚ್ಚಲಾಗಿದೆ. ಇದರ ಎದಿರುಗಡೆಯೇ ವಸ್ತುಸಂಗ್ರಹಾಲಯವನ್ನು ನೋಡಬಹದು. ಈ ಸಂಗ್ರಹಾಲಯವು ಬಹಮನಿ ಸುಲ್ತಾನರ ಮತ್ತು ಬರೀದ್ ಶಾಹಿಗಳ ಕಾಲದ ಶಸ್ತ್ರಾಸ್ತ್ರ, ಕತ್ತಿಗಳು, ಬಂದೂಕುಗಳು, ಫಿರಂಗಿ ಮತ್ತು ಫಿರಂಗಿ ಗುಂಡುಗಳನ್ನು ಒಳಗೊಂಡಿದೆ.

ನಾವು ಒಳಹೋದ ಕೂಡಲೇ ಕೋಟೆಯ ಮುಖ್ಯ ಭಾಗಗಳನ್ನು ನೋಡುವ ಮೊದಲು ಫಿರಂಗಿ ನೋಡಿಕೊಂಡು ಬರೋಣವೆಂದು ಹೊರಟೆವು. ಈಶಾನ್ಯ ದಿಕ್ಕಿಗಿರುವ ಆ ಫಿರಂಗಿಯನ್ನು ನೋಡಲು ಹೆಚ್ಚಾಗಿ ಪ್ರವಾಸಿಗರು ಹೋಗಲ್ಲ. ಗೊತ್ತಿದ್ದವರು ಮತ್ತು ಆಸಕ್ತಿ ಉಳ್ಳವರು ಮಾತ್ರ ಹೋಗುತ್ತಾರೆ. ಆ ಕಡೆ ಹೋಗುವಾಗ ಒಂದು ಮನೆಯಲ್ಲಿ ಸಾಕಿದ ನಾಯಿ ತನ್ನ ತಲೆ ಹೊರಹಾಕಿ ನಮ್ಮತ್ತ ನೋಡಿ ಈ ಕೋಟೆ ಆವರಣಕ್ಕೆಲ್ಲ ತಾನೆ ರಾಜ ಅನ್ನೋ ತರ ನಮ್ಮನ್ನು ನೋಡಿ ಬೊಗಳುತ್ತಿತ್ತು. ಹೊರಗೆ ಬಾ ಅಂತ ಕರೆದರೆ ಉಹುಂ! ಆಸಾಮಿ ಬರಲೇ ಇಲ್ಲ. ಉತ್ತರಕುಮಾರನ ಪೌರುಷ ಇಲ್ಲಿ ಕೇವಲ ಮನೆ ಒಳಗೆ.

ಈ ಗೋಪುರ ನೋಡಲು ಹೋಗುವ ದಾರಿಯಲ್ಲಿ ಕೋಟೆಯ ಒಳಗೆ ವಾಸಿಸುವ ಜನವಸತಿ ಪ್ರದೇಶವನ್ನು ದಾಟಿ ಹೋಗಬೇಕು. ಅದನ್ನು ದಾಟಿದ ನಂತರ ತಿರುಗು ಗೋಪುರದ ಮೇಲೆ ಈ ಫಿರಂಗಿಯನ್ನು ಕಾಣಬಹುದು. ಫಿರಂಗಿ ನೋಡಲು ಹೋಗುವಾಗಲೇ ಒಂದು ಮನೆ ಎದಿರು ಫಿರಂಗಿ ಗುಂಡುಗಳು ನೋಡಲು ಸಿಕ್ಕವು. ಕೆಳಗಿನ ಫೋಟೋ ನೋಡಿದರೆ ಓದುಗರಿಗೆ ಅನಿಸುತ್ತಿರಬೇಕು ನನಗೆ ಫೋಟೋ ಶೋಕಿ ತುಂಬಾ ಇದೆ ಅಂತ. ಆದರೆ ಇದೆಲ್ಲ ಸಿದ್ದಿಯ ಐಡಿಯಾ. ನಾನು ಚನ್ನಾಗಿ ಪೋಸ್ ಕೊಡ್ತೀನಿ ಅಂತಾನೂ ಅಲ್ಲ, ಅಥವಾ ನನ್ನ ಮೇಲಿನ ಪ್ರೀತಿಗೂ ಅಲ್ಲ, ಅವರು ಈ ಫಿರಂಗಿ, ಗೋಡೆ, ಫಿರಂಗಿ ಗುಂಡುಗಳ ಜೊತೆ ನನ್ನ ಫೋಟೋ ಹಿಡಿಯುವದು ಕೇವಲ ಓದುಗರಿಗೆ ಮತ್ತು ಫೋಟೋ ನೋಡುವವರಿಗೆ ಈ ಐತಿಹಾಸಿಕ ಸ್ಮಾರಕಗಳ ಅಳತೆ ಮತ್ತು ಎತ್ತರ ತಿಳಿಯಲಿ ಅಂತ ಮಾತ್ರ. :(

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ಕೋಟೆಯ ಒಳಗಿರುವ ಸಭಾಂಗಣ. ಇಲ್ಲಿ ಸುಲ್ತಾನರ ಕಾಲದಲ್ಲಿ ಸಭೆಗಳು ನಡೆಯುತ್ತಿದ್ದವೆಂದು ಹೇಳಲಾಗುತ್ತದೆ. ಇದೆ ಕಟ್ಟಡದ ಮೇಲೆ ಒಂದು ಸಣ್ಣ ರಚನೆ ಸೈನಿಕ ನಿಂತು ಕಾವಲು ಕಾಯಲು ಮಾಡಲಾಗಿದೆ. ಈ ರಚನೆ ನನ್ನನ್ನು ತುಂಬಾ ಆಕರ್ಷಿಸಿತು.

ಫಿರಂಗಿ ನೋಡಿ ಬಂದು ಈ ಹಳೆಯ ಬಾವಿ ಮತ್ತು ಬಾವಿಯಿಂದ ನೀರು ಸೇದಿ ಹಾಕಲು ಮಾಡಿದಂತ ದೋಣಿ ಕಾಣಬಹುದು. ಇಷ್ಟು ನೋಡೂತ್ತಿಗಾಗಲೇ ಬಿಸಿಲು ಏರಿದ್ದರಿಂದ ನಮಗೆ ತುಂಬಾ ಆಯಾಸವಾಯಿತು. ಅಲ್ಲಿಯೇ ನೆರಳಲ್ಲಿ ಸ್ವಲ್ಪ ಹೊತ್ತು ಕುಳಿತು ಮತ್ತೆ ಕೋಟೆಯ ಮುಂದಿನ ವೀಕ್ಷಣೆ ಪ್ರಾರಂಭಿಸಿದೆವು.

ಕೋಟೆಯ ಒಳಗಿನ ಪ್ರವೇಶ ಮಾರ್ಗ. ಬಾಗಿಲುಗಳ ಒಳಗೆ ಎರಡು ಬದಿಯಲ್ಲಿ ಎತ್ತರವಾದ ಕಟ್ಟೆಗಳನ್ನು ಕಟ್ಟಲಾಗಿದೆ.

ಇದು ಕೋಟೆಯ ಒಳಗಿರುವ ಬಡಿ ತೋಪ ಬುರ್ಜ್. ಕೋಟೆಯ ಪ್ರವೇಶದಿಂದ ಸುಮಾರು ದೂರದಲ್ಲಿರುವ ಈ ಫಿರಂಗಿ ದೊಡ್ಡ ತಿರುಗು ಗೋಪುರದ ಮೇಲಿದೆ. ಫಿರಂಗಿ ಕೂಡ ದೊಡ್ಡದಾದ್ದರಿಂದ ಇದಕ್ಕೆ ಬಡಿ ತೋಪ ಬುರ್ಜ್ ಎಂದು ಕರೆಯುತ್ತಾರೆ.

ಬಡಿ ತೋಪ ಬುರ್ಜ್ ಮೇಲೆ ನಿಂತು ತೆಗೆದ ಕೋಟೆಯ ಅವಶೇಷದ ಚಿತ್ರ.

ಬೀದರ್ ಅರಮನೆಯ ಗೋಡೆ ಬಿದ್ದು ಹೋಗಿರುವ ಚಿತ್ರ. ಇಲ್ಲಿಯೂ ಕೂಡ ಕೇವಲ ಬಿದ್ದಿರುವ ಗೋಡೆಯ ಚಿತ್ರ ಹಾಕಿದರೆ ಯಾರಿಗೂ ಅದರ ಗಾತ್ರದ ಕುರಿತು ತಿಳಿತಿರಲಿಲ್ಲ. ನನ್ನನ್ನು ಅದರ ಪಕ್ಕಕ್ಕೆ ನಿಲ್ಲಿಸಿದ್ದಕ್ಕೆ ಗೋಡೆ ಅಳತೆ ತಿಳಿಯುತ್ತದೆ.

ಅರಮನೆ ಅವಶೇಷದ ಮತ್ತೊಂದು ಚಿತ್ರ.

ಮ್ಯೂಸಿಯಂ ಮುಂದೆ ದೊಡ್ಡ ಲಾನ್ ಮತ್ತು ಅದರ ಕೊನೆಯಲ್ಲಿ ನೀವು ಹಳೆಯ ಅರಮನೆಯ ತರ್ಕಶ್ ಮಹಲನ   ಮುರಿದ ರಚನೆಯನ್ನು ಕಾಣಬಹುದು. ಇದು ಇಂಡೋ-ಇಸ್ಲಾಮಿಕ್ ಶೈಲಿಯ ರಚನೆಗೆ ಉತ್ತಮ ಉದಾಹರಣೆಯಾಗಿದೆ, ಮಹಲ್ನ ಮುಖ್ಯ ವಿನ್ಯಾಸವು ಟರ್ಕಿಷ್ ಶೈಲಿ ಮತ್ತು ಮಹಲ್ ಒಳಗೆ ಮೊಘಲ್ ಶೈಲಿಯಂತಹ ಮಹಡಿಯ ವಿನ್ಯಾಸವನ್ನು ನೀವು ನೋಡಬಹುದು. ಕೋಟೆಯ ಮೇಲ್ಭಾಗದಿಂದ ಕೂಡ ಕೋಟೆಯ ಉತ್ತಮ ನೋಟವಿದೆ. ೧೪೩೨ ರಲ್ಲಿ ಬಹಾಮನಿ ಅರಸರು ಈ ತರ್ಕಶ್ ಮಹಲ್ ಅನ್ನು ಕಟ್ಟಿದರು ಮತ್ತು ಇದು ಬಹಾಮನಿ ಮತ್ತು ಬರಿದ್ ಸಮಯದ ಅನೇಕ ಕಾರ್ಯಗಳು ಮತ್ತು ಸಮಾರಂಭಗಳಿಗೆ ಸಾಕ್ಷಿಯಾಗಿದೆ. ಮಹಲ್ನ ಒಳಭಾಗದಲ್ಲಿ ಗ್ರಾನೈಟ್ ಕೆತ್ತಿದ ವಿನ್ಯಾಸವನ್ನು ಹೊಂದಿದ್ದು, ರಾಜಮನೆತನದ ಅತಿಥಿಗಳಿಗಾಗಿ ಮತ್ತು ಸುಲ್ತಾನರ ಇತರ ಪ್ರಮುಖ ಸದಸ್ಯರಿಗೆ ಬಳಸಲಾಗುತ್ತಿತ್ತು. ಈಗ ಈ ತರ್ಕಶ್ ಮಹಲ್ ಕೆಟ್ಟದಾಗಿ ಕುಸಿದಿದೆ, ಆದರೆ ಉಳಿದಿರುವ ಅದರ ಅವಶೇಷಗಳನ್ನು ನೋಡಿ ಆಗಿನ ವೈಭವವನ್ನು ನೀವು ಊಹಿಸಬಹುದು.
ತರ್ಕಶ್ ಮಹಲಿನ ಮುಖಭಾಗದ ಬಲಬದಿಗೆ ನಾವು ಸೋಲಾ ಕಂಬ ಮಸ್ಜಿದ್ ನೋಡಬಹುದು. ಹೆಸರೇ ಸೂಚಿಸುವಂತೆ ಈ ಮಸೀದಿಯು ಹದಿನಾರು ಕಂಬಗಳನ್ನು ಹೊಂದಿದೆ. ಇದನ್ನು ೧೪ನೇ ಶತಮಾನದಲ್ಲಿ ತುಘಲಕ್ ನ ಕಾಲದಲ್ಲಿ ನಿರ್ಮಿಸಲಾಯಿತು ನಂತರದಲ್ಲಿ ವಿಸ್ತರಿಸಲಾಯಿತು. ಇದು ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡದಾದ ಮಸೀದಿ ಎಂದು ಹೇಳಬಹುದು. ಸುಲ್ತಾನರ ಕಾಲದಲ್ಲಿ ಇದನ್ನು ಜನಾನ ಮಸ್ಜಿದ್ ಎಂದು ಕರೆಯುತ್ತಿದ್ದರೆಂದು ಹೇಳಲಾಗುತ್ತದೆ.

ಬೀದರ್ ಕೋಟೆ ಸಂಕೀರ್ಣದಲ್ಲಿರುವ ಅತ್ಯುತ್ತಮ ಸಂರಕ್ಷಿತ ಸ್ಮಾರಕ ರಂಗೀನ್ ಮಹಲ್. ಇದು ಗುಂಬಜ್ ಬಾಗಿಲ ಹತ್ತಿರವಿದೆ. ೧೬ ನೇ ಶತಮಾನದ ಮಧ್ಯದಲ್ಲಿ ನಿರ್ಮಿಸಲಾದ ಈ ಸ್ಮಾರಕವು ಆರು-ಬೇ ಹಾಲ್ ಅನ್ನು ಹೊಂದಿದೆ, ಇದು ಆಯತಾಕಾರದ ರೂಪದಲ್ಲಿ ಮರದ ಕಾಲಮ್ ಗಳನ್ನು ಹೊಂದಿದೆ. ಪ್ರತಿ ಕಾಲಮ್ ವಿಸ್ತಾರವಾದ ಆವರಣಗಳನ್ನು ಹೊಂದಿದೆ. ಮಹಲ್ ನ ಒಳಗೆ, ಒಳಕೊಠಡಿಗಳಿಗೆ ಹೋಗಲು ಪ್ರವೇಶದ್ವಾರವಿದೆ, ಅದರ ಮೇಲೆ ಬಹುವರ್ಣದ ಟೈಲ್ವರ್ಕ್ನ ಚೌಕಟ್ಟನ್ನು ಕಾಣಬಹುದು. ಪ್ರವೇಶ ಕಮಾನುಗಳ ಮೇಲೆ, ಖುರಾನ್ ನ  ಪದ್ಯಗಳನ್ನು ಕೆತ್ತಲಾಗಿದೆ.

ಕೋಟೆ ಹೊರ ರಸ್ತೆಯಿಂದ ಕಾಣುತ್ತಿರುವ ಕೋಟೆಯ ತಿರುಗು ಗೋಪುರ.

ಇಷ್ಟೋತ್ತಿಗಾಗಲೇ ಬೀದರ್ ರಾಜಧಾನಿಯಾಗಿ ತನ್ನ ಗುರುತನ್ನು ಕಳೆದುಕೊಂಡಿತು ಮತ್ತು ಆದಿಲ್ ಶಾಹಿಗಳ ನಿಯಂತ್ರಣಕ್ಕೆ ಒಳಪಟ್ಟಿತು. ಆದರೆ ಅದು ಹಳೆಯ ಬರೀದ್ ಶಾಹಿಗಳ ದೊಡ್ಡ ಪ್ರದೇಶವನ್ನು ನಿಯಂತ್ರಿಸುವ ಪ್ರಮುಖ ಕೋಟೆಯಾಗಿತ್ತು. ಮೊಘಲ್ ಸಾಮ್ರಾಜ್ಯದ ರಾಜ ಔರಂಗಜೇಬನು ತನ್ನ ಸಾಮ್ರಾಜ್ಯದ ಗಡಿಗಳನ್ನು ವಿಸ್ತರಿಸಬೇಕೆಂದು ಅಂದುಕೊಂಡನು. ಆದಿಲ್ಶಾಹಿಗಳನ್ನು ಮುತ್ತಿಗೆ ಹಾಕುವದು ಸುಲಭವಲ್ಲ ಎಂದು ಯೋಚಿಸಿ ಅವನು ೧೬೫೭ ರಲ್ಲಿ ಬೀದರ್ ಕೋಟೆಗೆ ಮುತ್ತಿಗೆ ಹಾಕಿದನು. ಆಗ ಅವನ ಹತ್ತಿರ ಸುಮಾರು ೧೦೦ ಸಾವಿರ ಸೈನ್ಯವಿತ್ತು. ಔರಂಗಜೇಬನ ಸೈನ್ಯವು ಸೈನಿಕರು, ಫಿರಂಗಿ (ತೋಪು), ಬಂದೂಕು, ಯುದ್ಧದ ಆನೆಗಳನ್ನು ಒಳಗೊಂಡಿತ್ತು. ಆದರೆ ಆದಿಲ್ ಶಾಹಿ ಕಮಾಂಡರ್ ಸಿದ್ದಿ ಮಾರ್ಜನ್ ಹತ್ತಿರ ಇದ್ದದ್ದು ಕೇವಲ ಐದು ಸಾವಿರ ಸೈನ್ಯ ಮಾತ್ರ. ಆದರೂ ಕೂಡ ಕೋಟೆಯ ಎರಡು ಕಂದಕ ಹಾಗೂ ಭದ್ರತೆಯ ಕಾರಣದಿಂದ ಔರಂಗಜೇಬ್ ಬೀದರ್ ಕೋಟೆ ಭೇದಿಸುವಲ್ಲಿ ಅಸಫಲನಾದನು, ನಂತರ ಅವನು ರಾಕೆಟ್ ಗಳನ್ನು ಉಪಯೋಗಿಸಿದನು. ಔರಂಗಜೇಬ್ ಯುದ್ಧದಲ್ಲಿ ರಾಕೆಟ್ಗಳನ್ನು ಬಳಸಿದ ಭಾರತದ ಇತಿಹಾಸದಲ್ಲಿ ಮೊದಲ ವ್ಯಕ್ತಿಯಾಗಿದ್ದಾನೆ. ಈ ರಾಕೆಟ್ಗಳ ಪೈಕಿ ಒಂದು ರಾಕೆಟ್ ಕೋಟೆಯಲ್ಲಿರುವ ಮದ್ದಿನ ಪುಡಿ ಶೇಖರಣಾ ಕೊಠಡಿಗೆ ತಗಲಿ ದೊಡ್ಡ ಸ್ಫೋಟ ಸಂಭವಿಸಿತು. ಈ ಘಟನೆಯಲ್ಲಿ ಸಿದ್ದಿ ಮಾರ್ಜನ್ ತೀವ್ರವವಾಗಿ ಗಾಯಗೊಂಡನು. ಸುಮಾರು  ೨೭ ದಿನಗಳ ಮುತ್ತಿಗೆಯ ನಂತರ ಬೀದರ್ ಕೋಟೆಯನ್ನು ಮೊಘಲರು ವಶಪಡಿಸಿಕೊಂಡರು. ಇದಾದ ನಂತರ ಬೀದರ್ ತನ್ನ ವೈಭವವನ್ನು ಎಂದಿಗೂ ಹಿಂದೆ ಪಡೆಯಲಾಗಲಿಲ್ಲ ಮತ್ತು ಅದು ೧೭೨೪ ರಲ್ಲಿ ಹೈದೆರಾಬಾದ್ ನಿಜಾಮನಾದ ಆಸಿಫ್ ಜಾಹಿ ಅಡಿಯಲ್ಲಿ ಬಂದಿತು. ಸ್ವಾತಂತ್ರ್ಯ ನಂತರ ಬೀದರ್ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಯಿತು.
ಅಂತೂ ಇಂತೂ ನಮ್ಮ ಬೀದರ್ ಕೋಟೆಯ ದರ್ಶನ ಚೆನ್ನಾಗೆ ಆಯಿತು. ಬಿಸಿಲಿನ ಬೇಗೆಗೆ ಸ್ವಲ್ಪ ಸುಸ್ತು ಹೊಡೆದಿದ್ದರು ಅಷ್ಟೊಂದು ಐತಿಹಾಸಿಕ ಸ್ಮಾರಕಗಳನ್ನು ಒಟ್ಟಿಗೆ ನೋಡಿದ ಸಮಾಧಾನ ಸಂತೋಷವಿತ್ತು. ಆ ದಿನದ ಪ್ರವಾಸ ಅಲ್ಲಿಗೆ ಮುಗಿಸಿ ಮರಳಿ ರೂಮ್ ಗೆ ಹೋಗಿ ಸ್ನಾನ ಮಾಡಿ ಗುರುದ್ವಾರಕ್ಕೆ ಹೋದೆವು.
.........

1 comment:

Anonymous said...

Andahage nimm height eshtu antaane gottaglill, gottadre phirangi haagu aa godeya sizu gottagtittu