ನವ ಬೃಂದಾವನ -
ಆಗಸ್ಟ್ ೧೪, ೨೦೧೭
ನವ ಬೃಂದಾವನವು ಹಂಪಿಯಿಂದ ಸುಮಾರು ೨೦ ಕಿ ಮೀ ದೂರದಲ್ಲಿರುವ ಆನೆಗುಂದಿಯಲ್ಲಿದೆ. ತುಂಗಭದ್ರಾ ನದಿಯಿಂದ ಸುತ್ತುವರೆದ ಈ ದ್ವೀಪದಲ್ಲಿ ೯ ಹಿಂದೂ ಮಧ್ವ ಸಂತರುಗಳ ಸಮಾಧಿಗಳು ಇರುವದರಿಂದ ಇದಕ್ಕೆ ನವ ಬೃಂದಾವನವೆಂದು ಕರೆಯುತ್ತಾರೆ. ಆನೆಗುಂದಿಯಿಂದ ಸುಮಾರು ೧ ಕಿ ಮೀ ದೂರದಲ್ಲಿರುವ ನವಬೃಂದಾವನಕ್ಕೆ ಹೋಗಬೇಕಾದರೆ ನದಿಯಲ್ಲಿ ನೀರಿದ್ದಾಗ ತೆಪ್ಪಗಳ ಸಹಾಯದಿಂದ ದಾಟಬಹುದು. ಆದರೆ ನಾವು ಹೋದಾಗ ನದಿಯಲ್ಲಿ ನೀರಿಲ್ಲದ್ದರಿಂದ ನದಿಯನ್ನು ನಡೆದೇ ದಾಟಬಹುದಾಗಿತ್ತು. ತಿಮ್ಮ ನಮ್ಮ ಮಾರ್ಗದರ್ಶಿಯಾಗಿದ್ದ. ಅಕ್ಕ ಹಿಂಗೇ ಹಂಗೆ ಎಂದು ದಾರಿಯುದ್ದಕ್ಕೂ ಏನಾದರೊಂದು ಕಥೆ ಹೇಳುತ್ತಾ ಬರುತ್ತಿದ್ದನು. ನಂಗಂತೂ ತುಂಬಾ ಒಳ್ಳೆ ಕಂಪನಿ ಸಿಕ್ಕಂಗಾಯ್ತು. ಸಿದ್ದಿ ಫೋಟೋ ತೆಗೆಯೋದು, ಏನಾದರೊಂದು ರಿಸರ್ಚ್ ಮಾಡೋದರಲ್ಲಿ ನಿರತರಾಗಿದ್ದರು ಇದ್ದರು.
ಮುಕ್ಕಾಲು ಭಾಗ ದಾಟಿದಮೇಲೆ ವಿಶಾಲವಾಗಿ ಹಾಸಿಕೊಂಡ ಒಂದು ಬಂಡೆಕಲ್ಲು ಸಿಕ್ಕಿತು. ಅಲ್ಲಿ ನಾವು ಒಂದು ಚಪ್ಪಡಿಯನ್ನು (ಹಾಸು ಬಂಡೆಯ ಗೋರಿ) ಕಾಣಬಹುದು. ಕೆಳಗಿನ ಚಿತ್ರದಲ್ಲಿ ಆ ಚಪ್ಪಡಿಯ ಹಿಂದೆ ಕಾಣುತ್ತಿರುವ ಮಂಟಪ ಶ್ರೀ ಕೃಷ್ಣದೇವರಾಯರ ಸಮಾಧಿ ಎಂದು ಹೇಳುತ್ತಾರೆ. ಅದರ ಪಕ್ಕದಲ್ಲಿ ಗುಡ್ಡದ ಮೇಲೆ ಕಾಣುತ್ತಿರುವದು ಚಿಂತಾಮಣಿ ಮಹಾಪೀಠ.ಚಪ್ಪಡಿಯ ಪಕ್ಕದಲ್ಲೇ ಚಿಕ್ಕದಾದ ಕಲ್ಲಿನ ಸೂರ್ಯನಾರಾಯಣ ಗುಡಿಯನ್ನು ಕಾಣಬಹುದು.
ಸೂರ್ಯನಾರಾಯಣ ಸ್ವಾಮಿಗೆ ನಮಸ್ಕಾರ ಮಾಡಿ ಮತ್ತೆ ಮುಂದೆ ನಡೆದೆವು. ಸ್ವಲ್ಪ ದೂರ ಹೋದ ಮೇಲೆ ಮತ್ತೊಂದು ಬಂಡೆ ಸಿಕ್ಕಿತು. ನೀರಿದ್ದಾಗ ಈ ಬಂಡೆಗಳನ್ನೆಲ್ಲ ನೋಡಲು ಆಗುವದಿಲ್ಲ. ನೀರಿಲ್ಲದ್ದರಿಂದ ಈ ಸ್ವಚ್ಚವಾದ ಬಂಡೆಗಳ ಮೇಲಿನ ತೆರೆಗಳ ಅಥವಾ ಅಲೆಗಳ ನೃತ್ಯ ಮಾಡಿದ ಗುರುತನ್ನು ನಾವು ನೋಡಬಹುದು.
ನೀರು ಕಲ್ಲನ್ನು ಎಷ್ಟು ಚನ್ನಾಗಿ ಕೊರೆದಿದೆಯೆಂದರೆ, ನೈಸರ್ಗಿಕ ಶಿಲ್ಪತ್ವ ಎದ್ದು ಕಾಣುತ್ತಿದೆ. ನಮಗೆ ಆ ಬಂಡೆ ನೋಡುತ ಅಲ್ಲೇ ನಿಂತು ಬಿಡಬೇಕು ಎಂದೆನಿಸಿತು. ಆದರೆ ಆಗಲೇ ಸಂಜೆಯಾಗುತ್ತಾ ಬರುತ್ತಿದ್ದರಿಂದ ತುಂಬಾ ಸಮಯ ಅಲ್ಲಿ ಕಳೆಯುವ ಹಾಗಿರಲಿಲ್ಲ. ಮತ್ತೆ ಮುನ್ನಡೆಯತೊಡಗಿದೆವು. ನೀರಿನಲ್ಲಿರುವ ಆನೆಕಲ್ಲುಗಳು ನನಗೆ ತುಂಬಾ ಇಷ್ಟವಾದವು. ನಾನು ಕಲ್ಲುಗಳನ್ನು ಆರಿಸುತ್ತ ನಡೆಯತೊಡಗಿದೆ. ಈ ಕೆಲಸದಲ್ಲಿ ಸಿದ್ದಿ ಹಾಗೂ ತಿಮ್ಮನ ಸಹಕಾರವು ತುಂಬಾ ದೊರೆಯಿತು.
ಅಲೆಗಳ ಕೊರೆತಕ್ಕೆ ಸಿಕ್ಕು ಸುಂದರ ಆಕಾರ ತಳೆದ ಬಂಡೆಯ ಇನ್ನೊಂದು ನೋಟ -
ನೀರಲ್ಲಿ ಸುಳಿ ಬರುವದನ್ನು ಕೇಳಿದ್ದೇವೆ. ನಾಲ್ಕೂ ದಿಕ್ಕಿನಿಂದಲೂ ಒಮ್ಮೆಲೇ ನೀರು ನುಗ್ಗಿ ಬಂದು ಒಂದು ಕಡೆ ತಿರುಗಲು ಶುರು ಮಾಡಿದಾಗ ಆ ರಭಸಕ್ಕೆ ಅಲ್ಲಿನ ಬಂಡೆಕಲ್ಲು ಕೊರೆದು, ಎಷ್ಟೊಂದು ಸುಂದರವಾದ ಆಕಾರವನ್ನು ತಳೆದಿದೆ ಎಂದು ನೋಡಬಹುದು.
ಬಂಡೆಗಳ ಫೋಟೋ ತೆಗೆದುಕೊಂಡ ಮೇಲೆ, ಕೊನೆಯ ನೀರಿನ ಭಾಗವನ್ನು ದಾಟತೊಡಗಿದೆವು. ಕೆಲವೊಂದು ಕಡೆ ನೀರು ಮೊಣಕಾಲಿಗಿಂತಲೂ ಮೇಲೆ ಬರುತ್ತಿತ್ತು. ಅಲ್ಲಲ್ಲಿ ದಾಟಲು ಅನುಕೂಲವಾಗಲಿ ಎಂದು ಚೀಲದಲ್ಲಿ ಉಸುಕನ್ನು ಹಾಕಿ ನೀರಲ್ಲಿ ಹಾಕಿದ್ದರು. ನದಿ ದಂಡೆಯ ಮೇಲೆ ಕಲ್ಲುಗಳ ರಚನೆ ಅದ್ಭುತ ಸೌಂದರ್ಯಕ್ಕೆ ಕಾರಣವಾಗಿತ್ತು. ಆ ಕಲ್ಲುಗಳ ರಚನೆಯ ಹಿಂದೆಯೇ ನವಬೃಂದಾವನ ದ್ವೀಪ.
ನವ ಬಂದಾವನದ ಪ್ರವೇಶ ದ್ವಾರಕ್ಕೆ ಬಂದ ನಂತರ ಕಂಪೌಂಡಿನ ಹೊರಗೆ ರಾಶಿ ರಾಶಿಯಾಗಿ ಬಿದ್ದಿರುವ ಮಣ್ಣಿನ ಪಣತೆಗಳನ್ನು ಕಾಣಬಹುದು. ವರ್ಷಕ್ಕೆ ಒಮ್ಮೆ ಅಲ್ಲಿ ದೀಪದ ಹಬ್ಬ ನಡೆಯುತ್ತದೆ ಎಂದು, ಅವೆಲ್ಲ ಭಕ್ತಜನರು ಬಂದು ದೀಪ ಹಚ್ಚಿ ಹೋದ ದೀಪಗಳನ್ನು ಹಬ್ಬದ ನಂತರ ಒಂದು ಕಡೆ ಗುಡ್ಡೆ ಹಾಕಲಾಗಿದೆಯೆಂದು ತಿಮ್ಮ ಹೇಳಿದನು.
ಬೃಂದಾವನದ ಒಳಗೆ ಕಾಲಿಡುತ್ತಿದ್ದಂತೆ ೯ ವಿವಿಧ ಆಕಾರದ, ವಿವಿಧ ವಿನ್ಯಾಸದ ಬೃಂದಾವನಗಳನ್ನು ಕಾಣಬಹುದು. ಬೃಂದಾವನಗಳ ಸುತ್ತಲೂ ಒಂದು ಗೆರೆಯನ್ನು ಕೊರೆಯಲಾಗಿದೆ. ಅದನ್ನು ದಾಟಿ ಯಾರು ಒಳಗೆ ಹೋಗುವಂತಿಲ್ಲ. ಐತಿಹಾಸಿಕ ಸ್ಮಾರಕಗಳ ಉಳಿವಿಗಾಗಿ ಈ ರೀತಿ ಮಾಡಿದ್ದಾರೆಂದು ಹೇಳಬಹುದು. ನಾನು ಆ ಬೃಂದಾವನಗಳ ಪ್ರದಕ್ಷಿಣೆ ಹಾಕಿ ವಿಡಿಯೋ ಮಾಡಿಕೊಂಡೆನು. ಸಿದ್ದ ಫೋಟೋ ತೆಗೆಯುವದರಲ್ಲಿ ನಿರತರಾಗಿದ್ದರು.
ಈ ಕೆಳಗಿರುವ ೯ ಮಧ್ವ ಸಂತರ ಸಮಾಧಿಗಳನ್ನೇ ನವಬೃಂದಾವನವೆಂದು ಹೆಸರಿಸಲಾಗಿದೆ-
೧. ಶ್ರೀ ಪದ್ಮನಾಭ ತೀರ್ಥ
೨. ಶ್ರೀ ಕವೀಂದ್ರ ತೀರ್ಥ
೩. ಶ್ರೀ ವಾಗೀಶ ತೀರ್ಥ
೪. ಶ್ರೀ ರಘುವರ್ಯ ತೀರ್ಥ
೫. ಶ್ರೀ ಗೋವಿಂದ ವೊಡೆಯರ್
೬. ಶ್ರೀ ವ್ಯಾಸ ತೀರ್ಥ ಅಥವಾ ವ್ಯಾಸರಾಜ
೭. ಶ್ರೀ ಸುಧೀಂಧ್ರ ತೀರ್ಥ
೮. ಶ್ರೀ ಶ್ರೀನಿವಾಸ ತೀರ್ಥ
೯. ಶ್ರೀ ರಾಮ ತೀರ್ಥ
ಈ ಎಲ್ಲ ಮೇಲಿನ ಮಧ್ವ ಸಂತರುಗಳು ತುಂಗಭದ್ರಾ ನದಿಯ ದಡದಲ್ಲಿರುವ ಶ್ರೀ ಉತ್ತರಾಧಿ ಮಠ, ಶ್ರೀ ವ್ಯಾಸರಾಜ ಮಠ, ಶ್ರೀ ರಾಘವೇಂದ್ರ ಸ್ವಾಮಿ ಮಠ ಮತ್ತು ಶ್ರೀ ಶ್ರೀಪಾದರಾಜ ಮಠಕ್ಕೆ ಸಂಬಂಧಿಸಿದ್ದವರೆಂದು ಹೇಳಲಾಗಿದೆ.
ಎರಡು ಬೃಂದಾವನಗಳನ್ನು ಮಾತ್ರ ಹೆಸರಿನಿಂದ ಗುರುತಿಸಲಾಗಿದೆ. ಮಿಕ್ಕವುಗಳಿಗೆ ಹೆಸರನ್ನು ಗುರುತಿಸಿಲ್ಲ. ಕೆಳಗಿರುವ ಹಳದಿ ಫಲಕದಲ್ಲಿ ಆ ಬೃಂದಾವನ ಶ್ರೀ ರಘುವರ್ಯ ತೀರ್ಥರದೆಂದು ಬರೆಯಲಾಗಿದೆ.
ಕೆಳಗಿನ ಬೃಂದಾವನವು, ವಿಜಯನಗರ ಸಾಮ್ರಾಜ್ಯದ ರಾಜಗುರುವಾಗಿದ್ದ ವ್ಯಾಸರಾಜರದ್ದೆಂದು ಹೇಳಲಾಗುತ್ತದೆ.
ಅಲ್ಲೇ ಪಕ್ಕದಲ್ಲೇ ಒಂದು ಕಟ್ಟೆಯ ಮೇಲೆ ಹನುಮಂತ ಹಾಗೂ ರಂಗನಾಥ ಗುಡಿಗಳನ್ನು ಕಾಣಬಹುದು.
ನವಬೃಂದಾವನ ನೋಡಿಕೊಂಡು ಸೂರ್ಯ ಪಶ್ಚಿಮದೆಡೆಗೆ ಜಾರುವುದನ್ನು ಕಂಡು ಬೇಗ ಅತಿಥಿಗೃಹ ಸೇರಿಕೊಳ್ಳಬೇಕೆಂದು ನಿರ್ಧರಿಸಿ, ನವ ಬೃಂದಾವನಕ್ಕೆ ಕೊನೆಗೊಮ್ಮೆ ನಮಸ್ಕಾರ ಮಾಡಿ, ತಿಮ್ಮನೊಡನೆ ಆಣಿಕಲ್ಲು ಆರಿಸುತ್ತ ಮನೆಕಡೆ ಹೆಜ್ಜೆ ಹಾಕಿದೆವು.
ಸೂರ್ಯಾಸ್ತದ ವೇಳೆಗೆ ತಂಪಾದ ಗಾಳಿ ಬೀಸುತ್ತಿತ್ತು, ಆ ಸುಂದರ ಸಂಜೆಯಲ್ಲಿ ನೀರಿನಲ್ಲಿ ನಡೆದುಕೊಂಡು ಹೋಗುವದೇ ಒಂದು ಹುರುಪು, ಆನಂದ.
.........
No comments:
Post a Comment