Mar 2, 2019

ಶ್ರೀ ನರಸಿಂಹ ಝರಣಿ, ಬೀದರ್

ಸೆಪ್ಟೆಂಬರ್ ೩, ೨೦೧೮

ನರಸಿಂಹ ಝರನಿ ಇದು ಒಂದು ಗವಿ. ಸುಮಾರು ೩೦೦ ಮೀಟರ್ ಸುರಂಗದ ಒಳಗೆ ಹೋದರೆ ನರಸಿಂಹ ದೇವನ ದೇವಾಲಯವಿದೆ. ಈ ಸುರಂಗದುದ್ದಕ್ಕೂ ಸುಮಾರು ನಾಲ್ಕರಿಂದ ಐದು ಅಡಿ ನೀರು ಯಾವಾಗಲೂ  ಹರಿಯುತ್ತಿರುತ್ತದೆ. ನಾನು ಮೊದಲ ಬಾರಿಗೆ ಇದರ ಕುರಿತು ಸಿದ್ದನ ಬಾಯಲ್ಲೇ ಕೇಳಿದ್ದು. ತುಂಬಾ ಆಸಕ್ತಿದಾಯಕ ಸ್ಥಳವೆನಿಸಿತು. ಸಿದ್ದ ೨೦೧೨ ರಲ್ಲಿಯೇ ಇಲ್ಲಿ ಬಂದು ಹೋಗಿದ್ದರು. ನಾನು ನೋಡಲೇ ಬೇಕು ಎಂದಿದ್ದಕ್ಕೆ ನನ್ನನ್ನು ಕರೆದುಕೊಂಡು ಹೋದರು. ಈ ಸಣ್ಣ ಗುಡಿಯ ಹಿಂದೆ ಶಿವ ಪಾರ್ವತೀ ಕುಳಿತಿರುವ ಗೋಪುರವಿರುವದೇ ಗುಹೆಯ ಪ್ರಾರಂಭ.

ಹಾಲು ಬಿದ್ದ ಗುಡಿಗಳ ಸೌಂದರ್ಯ ಮಾನವನ ಹತೋಟಿಯಲ್ಲಿ ಅಥವಾ ಜನ ಪೂಜೆ ಮಾಡುವ ದೇವಸ್ಥಾನದಲ್ಲಿ ಕಾಣಲಾಗುವದಿಲ್ಲ. ಎಷ್ಟೇ ದೀಪ ಧೂಪ ಹಚ್ಚಲಿ, ಎಷ್ಟೇ ಕಾಯಿ ಕರ್ಪೂರ ಬೆಳಗಲಿ ಹೊಲಸು ಮಾಡುವದನ್ನು ಮಾತ್ರ ಮರೆಯುವದಿಲ್ಲ ಜನ. ಕೆಲವರಿಗೆ ನಾನು ಹೇಳುವದು ತಪ್ಪು ಎಣಿಸಬಹುದು ಆದರೆ ಇದು ನಿಜ. ಹಳೆಯ ಬಟ್ಟೆ ಎಸೆಯುವದು, ಉಗಳುವದು, ಅಡಿಗೆ ಮಾಡಿ ಅಲ್ಲಿಯೇ ಮುಸರೆ ಹಾಕುವದು ಮುಂತಾದ ಎಲ್ಲ ಲಕ್ಷಣಗಳನ್ನು ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಕಾಣಬಹುದು. ನಾನು ಇಲ್ಲಿ ನೋಡಿದ್ದೂ ಅದನ್ನೇ.

ನಾವು ಬೆಳಿಗ್ಗೆ ಬೇಗನೆ ಹೋದರು ಆಗಲೇ ಜನ ಜಂಗುಳಿ ತುಂಬಿತ್ತು. ದೊಡ್ಡ ಸಾಲೊಂದು ದೇವರ ಸನ್ನಿಧಿಗೆ ಹೋಗಲು ತಯಾರಾಗಿ ನಿಂತಿತ್ತು. ನನಗನಿಸಿದಂತೆ ಅವರು ಹಿಂದಿನ ದಿನವೇ ಬಂದು ಅಲ್ಲಿ ಉಳಿದುಕೊಂಡಿದ್ದರು. ಜನರು ನರಸಿಂಹ ದೇವರಿಗೆ ಹರಕೆ ಹೊತ್ತುಕೊಂಡು ಅಲ್ಲಿಗೆ ಬಂದಿರುತ್ತಾರೆಂದು ಸಿದ್ದ ಹೇಳುತ್ತಿದ್ದರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಮತ್ತು ಬಹುಶ ತೆಲಂಗಾಣದಿಂದನೂ ಜನ ಬಂದಿದ್ದರೆಂದು ತೋರುತ್ತದೆ.

ಸುರಂಗದ ಒಳಗೆ ಹೋಗಲು ಆಸೆ ಇದ್ದರು ನಾನು ಮೊದಲೇ ಸಿದ್ದನ ಅನುಭವ ಕೇಳಿ ಹೆದರಿದ್ದೆ. ತುಂಬಾ ಜನಸಂದಣಿ ಇರುತ್ತದೆ, ಸಿದ್ದ ಹೋದಾಗ ನೀರಿನ ಮೇಲೆ ಸತ್ತ ಜಿರಳೆಗಳು ತೇಲುತ್ತಿದ್ದವಂತೆ, ಮೇಲೆ ಯಾವಾಗಲೂ ಬಾವಲಿಗಳು ಜೋತಾಡುತ್ತಿರುತ್ತವೆ, ಕೆಲವೊಮ್ಮೆ ಹಾರುತ್ತಲೂ ಇರುತ್ತವೆ, ಆದರೆ ಈವರೆಗೂ ಅವು ಯಾರಿಗೂ ಹಾನಿ ಮಾಡಿಲ್ಲವಂತೆ. ಸುಮಾರು ಮುನ್ನೂರು ಮೀಟರ್ ನಡೆದ ಮೇಲೆ ಗರ್ಭ ಗುಡಿಯ ಹತ್ತಿರ ಅಷ್ಟೊಂದು ಜಾಗವಿಲ್ಲ, ಒಂದು ಸಮಯಕ್ಕೆ ಕೇವಲ ಎಂಟೇ ಜನ ದೇವರ ದರ್ಶನ ಮಾಡಲು ಸಾಧ್ಯ. ಮಿಕ್ಕ ಜನ ನೀರಿನಲ್ಲಿ ತಮ್ಮ ಸರದಿಗಾಗಿ ಕಾಯುತ್ತ ನಿಲ್ಲಬೇಕಾಗುತ್ತದೆ.

ನೀರಿನಲ್ಲಿ ಸಲ್ಫರ್ ಇದೆ ಎಂದು, ನೀರಲ್ಲಿ ಹೋಗುವದರಿಂದ ಚರ್ಮ ರೋಗಗಳೆಲ್ಲ ಗುಣವಾಗುತ್ತವೆಂದು ಜನ ಹೇಳುತ್ತಾರೆ. ನಾನಂತು ಬಟ್ಟೆ ತಂದಿರಲಿಲ್ಲ, ಅಲ್ಲದೆ ಜಿರಳೆ ಕಂಡರೆ ಭಯ ಜಾಸ್ತಿ, ಆದ್ದರಿಂದ ಒಳ ಹೋಗುವ ಧೈರ್ಯ ನಾನು ಮಾಡಲಿಲ್ಲ. ಹೊರಗಿನಿಂದನೆ ದೇವರಿಗೆ ನಮಸ್ಕಾರ ಮಾಡಿದೆ.


ಒಳಗಡೆ ಬೆಳಕು ಗಾಳಿ ಸೌಕರ್ಯವನ್ನು ಮಾಡಿದ್ದಾರೆ. ತುಂಬಾ ಜನ ಪ್ರವಾಸಿಗರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿರುತ್ತಾರೆ. ಅವರನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಹರಿ ಹರಿ ಎಂದು ನರಸಿಂಹ ನಾಮ ಸ್ಮರಣೆ ಮಾಡುತ್ತಾ ನಡೆಯುತ್ತಾರೆ.

೨೦೧೨ ರಲ್ಲಿ ನರಸಿಂಹ ಝರನಿ.
.........

No comments: