Oct 28, 2017

ಅಂಜನಾದ್ರಿ ಬೆಟ್ಟ, ಆನೆಗುಂದಿ

Aug 13. 2017
ನಾವು ಆನೆಗುಂದಿ ತಲುಪಿದಾಗ ಸುಮಾರು ಮಧ್ಯಾಹ್ನ ೪.೩೦ ಆಗಿತ್ತು. ಅಲ್ಲಿ ನಾವು ಹೋಂ ಸ್ಟೇ ಯಲ್ಲಿ ಉಳಿದುಕೊಂಡೆವು. ಸುಮಾರು ೫.೩೦ ರ ಹೊತ್ತಿಗೆ ಸ್ನಾನ ಮುಗಿಸಿ, ಅಂಜನಾದ್ರಿ ಬೆಟ್ಟ ನೋಡಲು ಹೊರಟೆವು. ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮ ಸ್ಥಳವೆಂದು ಹೇಳುತ್ತಾರೆ.ರಾಮಾಯಣದ ಇತಿಹಾಸವನ್ನು ಹೊತ್ತ ಈ ಆನೆಗುಂದಿ ಆ ನಂತರದಲ್ಲಿ ವಿಜಯನಗರದ ಆಡಳಿತದ ಪ್ರಮುಖ ಭಾಗವಾಗಿತ್ತು. ಡೆಲ್ಲಿ ಸುಲ್ತಾನರು ವಾರಂಗಲ್ ಮೇಲೆ ಆಕ್ರಮಣ ಮಾಡಿದಾಗ, ಹರಿಹರ ಮತ್ತು ಬುಕ್ಕರು ಅಲ್ಲಿಂದ ತಪ್ಪಿಸಿಕೊಂಡು ಆನೆಗುಂದಿಗೆ ಬಂದು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತದೆ. 

ಆನೆಗುಂದಿಯು ವಿಜಯನಗರ ಅರಸರ ಮೊದಲ ರಾಜಧಾನಿಯಾಗಿದ್ದು ನಂತರ ಸುಮಾರು ರಾಜಮನೆತನಗಳು ಇದನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸಿದವು.ವಿಜಯನಗರ ಸಾಮ್ರಾಜ್ಯವು ಈ ಪ್ರದೇಶದಲ್ಲಿ ಪಟ್ಟದಾನೆಗಳನ್ನು ಇಡುತ್ತಿದ್ದ ಕಾರಣಕ್ಕಾಗಿ ಈ ಆನೆಗುಂದಿ ಎಂಬ ಹೆಸರು ಬಂತೆಂದು ಹೇಳುತ್ತಾರೆ.

ಅಂಜನಾದ್ರಿ ಬೆಟ್ಟದ ನೋಟ
ಅಂಜನಾದ್ರಿ ಬೆಟ್ಟವನ್ನು ನೋಡಿದ ತಕ್ಷಣ ಇಷ್ಟು ಮೇಲೆ ಹತ್ತುವದು ಸಾಧ್ಯವಿಲ್ಲ ಎಂದುಕೊಂಡೆ. ಬೆಳಿಗ್ಗೆಯಿಂದ ಪ್ರಯಾಣ ಮಾಡಿದ್ದರಿಂದ ಸ್ವಲ್ಪ ಆಯಾಸ ಆಗಲೇ ಆಗಿತ್ತು. ಆದರೂ ನಮ್ಮಲ್ಲಿ ಸಮಯ ಕಡಿಮೆಯಿದ್ದು ನೋಡಬೇಕಾದ ಸ್ಥಳಗಳು ತುಂಬಾ ಇದ್ದಿದ್ದರಿಂದ ಇವತ್ತು ಈ ಬೆಟ್ಟ ನೋಡಲೇಬೇಕೆಂದು ಬಂದಿದ್ದೆವು. ಬೆಟ್ಟದ ಕೆಳಗೆ ಚಹಾ, ಎಳನೀರು ಅಂಗಡಿಗಳಿದ್ದವು. ಸ್ವಲ್ಪ ಚಹಾ ಕುಡಿದು ಮೇಲೆ ಹತ್ತಲು ಶುರು ಮಾಡಿದೆವು.

ಬೆಟ್ಟದ ಪ್ರವೇಶದ ನೋಟ 
ಕೆಲವು ಕಡೆ ಮೆಟ್ಟಿಲುಗಳು ಎತ್ತರವಾಗಿದ್ದರೆ, ಕೆಲವು ಕಡೆ ಸಾಮಾನ್ಯವಾಗಿದ್ದವು. ನಡು ನಡುವೆ ನಿಂತು ಸ್ವಲ್ಪ ವಿಶ್ರಾಂತಿ ತೆಗೆದು ಕೊಳ್ಳುತ್ತಾ ಜೊತೆಗೆ ಫೋಟೋ ತೆಗೆಯುತ್ತಾ ನಡೆದೆವು.

ಋಷಿಮುಖ ಬೆಟ್ಟ
ಅಂಜನಾದ್ರಿ ಬೆಟ್ಟದಿಂದ ತೆಗೆದ ಋಷಿಮುಖ ಬೆಟ್ಟದ ನೋಟ. ಋಷಿಮುಖ ಬೆಟ್ಟದ ಕುರಿತು ಹೇಳಬೇಕಾದಲ್ಲಿ, ನಿಶಾಧ ಬುಡಕಟ್ಟು ಸಮುದಾಯದ ಬೇಟೆಗಾರನ ಮಗಳಾದ  ಶಬರಿ ಎಂಬ ಕನ್ಯೆಗೆ ಅವಳ ತಂದೆ ಮದುವೆ ಗೊತ್ತುಮಾಡಿದ್ದ. ಮದುವೆಯ ಹಿಂದಿನ ರಾತ್ರಿ ಅವಳ ತಂದೆ ಬಹಳಷ್ಟು ಕುರಿಗಳನ್ನು ಮದುವೆ ಮನೆಯಲ್ಲಿ ಅಡಿಗೆ ಔತಣಕ್ಕಾಗೆಂದು ತೆಗೆದುಕೊಂಡು ಬಂದಾಗ ಅದು ಅವಳಿಗೆ ಇಷ್ಟವಾಗಲಿಲ್ಲ. ಪ್ರಾಣಿಗಳ ಮೇಲಿನ ಸಹಾನುಭೂತಿಯಿಂದ ಅವಳು ನಸು ಮುಂಜಾನೆಯಲ್ಲಿಯೇ ಮನೆಯನ್ನು ಬಿಟ್ಟು ಗುರುವಿನ ದರ್ಶನಕ್ಕಾಗಿ ನಡೆದಳು. ಎಷ್ಟೋ ದಿನಗಳ ಪ್ರಯಾಣದ ನಂತರ ಅವಳಿಗೆ ಋಷಿಮುಖ ಬೆಟ್ಟದಲ್ಲಿ ಋಷಿ ಮಾತಂಗ ಗುರುಗಳು ದೊರೆತರು. ತನ್ನ ಆಯಸ್ಸನ್ನು ಅವರ ಸೇವೆಯಲ್ಲಿಯೇ  ಕಳೆಯತೊಡಗಿದಳು. ಮಾತಂಗ ಋಷಿಗಳ ಅಂತಿಮ ಕಾಲದ ಹೊತ್ತಿಗೆ ಶಬರಿಗೂ ಕೂಡ ವಯಸ್ಸಾಗಿತ್ತು. ಅವಳಿಗೂ ಮಾತಂಗರು ಸೇರುತ್ತಿರುವ ಶಾಂತಿ ನೆಲೆಯನ್ನು ಸೇರಬೇಕೆಂಬ ಆಸೆ ಇತ್ತು. ಆಗ ಮಾತಂಗರು ಶ್ರೀ ರಾಮನ ದರ್ಶನ ನಿನಗಾಗುವದು ಅದಾದನಂತರ ನಿನಗೆ ಶಾಂತಿ ನೆಲೆ ದೊರಕುವದು, ಶ್ರೀ ರಾಮನಿಗಾಗಿ ನೀನು ಕಾಯಬೇಕೆಂದು ಹೇಳಿ ಅಂತಿಮ ಉಸಿರೆಳೆದರು. ಅದರಂತೆ ಶಬರಿ ಶ್ರೀ ರಾಮನಿಗಾಗಿ ಕಾದದ್ದು, ರಾಮನ ದರ್ಶನದ ನಂತರ ಜೀವ ತ್ಯಜಿಸಿದ ಕಥೆ ಎಲ್ಲರಿಗೂ ತಿಳಿದಿದೆ. ಇದೇ ಋಷಿಮುಖ ಬೆಟ್ಟದ ರಾಮಾಯಣದ ಇತಿಹಾಸ.

ಅಂಜನಾದ್ರಿ ಬೆಟ್ಟದ ಕಲ್ಲುಗಳ ಚಿತ್ರ.
ಅಂಜನಾದ್ರಿ ಬೆಟ್ಟದಿಂದ ತೆಗೆದ ಚಿತ್ರ
ನಾವು ಮೇಲೆ ಹತ್ತಿದಂತೆಲ್ಲ ಕೆಳಗಿನ ನೋಟವು ಇನ್ನು ಸುಂದರವಾಗಿ ಕಾಣುತ್ತಿತ್ತು. ಈ ಬೆಟ್ಟಕ್ಕೆ ಹತ್ತಲು ಬೇರೆ ದಿಕ್ಕಿನಿಂದ ಮತ್ತೊಂದು ದಾರಿ ಕೂಡ ನಾವು ಕಾಣಬಹುದು.

ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳ ಚಿತ್ರ
ಬೆಟ್ಟವನ್ನು ಏರಲು ಮೆಟ್ಟಿಲುಗಳನ್ನು ಅಂಕುಡೊಂಕಾಗಿ ಕೆತ್ತಿದ್ದಾರೆ. ನಾವು ಹೋದಾಗ ಇನ್ನು ಕೆಲೆಸ ನಡೆದಿದ್ದರಿಂದ ಮೆಟ್ಟಿಲುಗಳ ಮೇಲೆ ಕಡಿಯನ್ನು ಹಾಕಿದ್ದರು. ಎಷ್ಟೋ ಜನ ಚಪ್ಪಲಿ ಕೆಳಗೆ ಬಿಟ್ಟು ಹತ್ತಿ ಬಂದು ಕಡಿ ಕಾಲಿಗೆ ಚುಚ್ಚುತ್ತಿದ್ದರಿಂದ ಕಷ್ಟಪಡುತ್ತಿದ್ದರು. ಕೆಲವು ಭಕ್ತರು ಹತ್ತುವಾಗ ಹಾಗು ಇಳಿಯುವಾಗ ಜೈ ಶ್ರೀ ರಾಮ್ ಎನ್ನುತ್ತಾ ಸಾಗುತ್ತಿದ್ದರು.

ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳ ಚಿತ್ರ
ಈ ಚಿತ್ರದಲ್ಲಿ ಬಂಡೆಗಳು ಅಡ್ಡ ಬಂದಿದ್ದರಿಂದ ಮೆಟ್ಟಿಲುಗಳನ್ನು ಬಂಡೆಯ ಕೆಳಗಿನಿಂದ ಮಾಡಿದ್ದಾರೆ.

ಅಂಜನಾದ್ರಿ ಬೆಟ್ಟದ ಮೆಟ್ಟಿಲುಗಳ ಚಿತ್ರ
ಅಂಜನಾದ್ರಿ ಬೆಟ್ಟದಿಂದ ತುಂಗಭದ್ರಾ ನದಿಯ ನೋಟ
ಅಂಜನಾದ್ರಿ ಬೆಟ್ಟವು ಹಂಪಿಯಿಂದ ಅಂದಾಜು ೨೩ ಕೀ ಮೀ ನಷ್ಟು ದೂರವಿದೆ. ಅಂಜನಾದ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಹಂಪಿಯಲ್ಲಿರುವ ದೇವಸ್ಥಾನಗಳು ಕಾಣಿಸುತ್ತವೆ. ಮೇಲಿನ ಚಿತ್ರದಲ್ಲಿ ನೋಡಬಹುದು ತುಂಗಭದ್ರಾ ನದಿ ಹಾಗೂ ಹಂಪಿಯ ಕೆಲವು ದೇವಾಲಯಗಳನ್ನು ನಾವು ಕಾಣಬಹುದು.

ಆಂಜನೇಯ ಗುಡಿ
ಅಂತೂ ಹೇಗೋ ಬೆಟ್ಟದ ನೆತ್ತಿಯನ್ನು ತಲುಪಿದೆವು. ಸಹಜವಾಗಿ ಬಂದಾಗ ಇಷ್ಟೊಂದು ಆಯಾಸ ಬಹುಶ ಆಗುತ್ತಿರಲಿಲ್ಲವೇನೋ! ಹೈದೆರಾಬಾದಿನಿಂದ ಆನೆಗುಂದಿಗೆ ಪ್ರಯಾಣ ಮಾಡಿ ಸುಸ್ತಾಗಿದ್ದರಿಂದಲೂ, ಕಡಿಮೆ ನಿದ್ರೆಯಿಂದಲೂ ಬಹುಶ ಇಷ್ಟೊಂದು ಆಯಾಸ ಎನಿಸಿದ್ದು.

ಋಷಿಮುಖ ಬೆಟ್ಟದ ಚಿತ್ರ
ಋಷಿಮುಖ ಬೆಟ್ಟದ ಇನ್ನೂ ಹತ್ತಿರವಾಗಿಸಿ ತೆಗೆದ ಫೋಟೋ. ಈ ಅಂಜನಾದ್ರಿ ಬೆಟ್ಟದ ಮೇಲೆ ನಿಂತರೆ ಆಗಿನ ಕಿಷ್ಕಿಂದ ರಾಜ್ಯದ ಎಷ್ಟೋ ಭಾಗಗಳು ಕಾಣುತ್ತವೆ.

ಬೆಟ್ಟದ ಮೇಲಿನ ನೋಟ
ಮೇಲೆ ತಲುಪಿದ ಮೇಲೆ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಪಡೆದೆವು. ಅಲ್ಲಿ ಆಂಜನೇಯನ ಮಂತ್ರ ಪಠಣ ನಡೆದಿತ್ತು, ಕೇಳಲು ತುಂಬಾ ಹಿತಕರವಾಗಿತ್ತು. ತೀರ್ಥ ತೆಗೆದುಕೊಂಡು ಬೆಟ್ಟ ನೋಡಲು ಹೊರಗಡೆ ಬಂದೆವು. ಆಂಜನೇಯ ಜನ್ಮಸ್ಥಳದಲ್ಲಿ ವಾನರ ಸೈನ್ಯವನ್ನೇ ಕಾಣಬಹುದು. ಆದರೆ ಯಾರಿಗೂ ಏನು ಮಾಡದೇ ತಮ್ಮ ಪಾಡಿಗೆ ತಾವಿರುವ ಮಂಗಗಳು.

ಸೂರ್ಯಾಸ್ತ ನೋಡುವ ಸ್ಥಳದ ಚಿತ್ರ
ಈ ಬೆಟ್ಟದ ಮೇಲೆ ಸೂರ್ಯಾಸ್ತ ನೋಡಲು ಒಂದು ಜಾಗವಿದೆ. ಅಲ್ಲಿಂದ ತುಂಬಾ ಸುಂದರವಾಗಿ ಸೂರ್ಯಾಸ್ತ ಕಾಣಿಸುತ್ತದೆ. ಅಲ್ಲಿ ಹೋಗಲು ಅವಶ್ಯವಿದ್ದಲ್ಲಿ ಸೂಚಕಗಳನ್ನು ನಾವು ಕಾಣಬಹುದು. ನಾವು ಪೂರ್ತಿ ಸೂರ್ಯಾಸ್ತದವರೆಗೂ ಕಾಯದೆ ಮಳೆ ಬರುವ ತರಹ ಇದ್ದಿದ್ದರಿಂದ ಆದಷ್ಟು ಬೇಗ ಹೋಗಬೇಕೆಂದುಕೊಂಡೆವು.

ಬೆಟ್ಟದ ಮೇಲಿನ ಫ್ರಾಂಜಿಪ್ಯಾನಿ ಮರ
ಆ ಪೂರ್ತಿ ಬೆಟ್ಟದ ಮೇಲೆ ಕೇವಲ ಒಂದೇ ಮರವನ್ನು ನಾವು ಕಾಣಬಹುದು ಅದೇ ಫ್ರಾಂಜಿಪ್ಯಾನಿ ಮರ. ಯಾವುದೊ ಚಿತ್ರಕಾರ ತನ್ನ ಕುಂಚದಿಂದ ನಿಸರ್ಗದ ಒಡಲನ್ನು ಬಿಚ್ಚಿಟ್ಟಂತೆ ಸೂರ್ಯಾಸ್ತ ನೋಡುವ ಜಾಗದಲ್ಲೇ ಈ ಮರ ಸೌಂದರ್ಯ ಸೂಚಕವಾಗಿ ನಿಂತಿದೆ.

ಬೆಟ್ಟದ ಹಿಂದಿರುವ ಗದ್ದೆಗಳ ಚಿತ್ರ
ದೇವರ ದರ್ಶನವಾದ ಮೇಲೆ ನಾನು ಸನ್ ಸೆಟ್ ಪಾಯಿಂಟ್ ಗೆ ಹೋಗಿ ಕುಳಿತುಕೊಂಡೆನು. ಸಿದ್ದಿ ಮಾತ್ರ ಬೆಟ್ಟದ ಎಲ್ಲ ಕಡೆ ತಿರುಗಾಡಿ ಫೋಟೋ ತೆಗೆದುಕೊಂಡು ಬಂದರು. ನಂತರ ಸ್ವಲ್ಪ ಸಮಯ ಅಲ್ಲಿಯೇ ಕುಳಿತೆವು. ತುಂಬಾ ಆಹ್ಲಾದಕರವಾದ ನಿಸರ್ಗದ ಸ್ವಬಗು ಅಲ್ಲಿ ಬಂದ ಯಾವುದೇ ಪ್ರವಾಸಿಗರನ್ನು ಹಿಡಿದಿಡುತ್ತೆ.

ಆಂಜನೇಯ  ಮತ್ತು ಅಂಜನ ದೇವಿ ಗುಡಿಯ ಚಿತ್ರ
ಅಂಜನಾದ್ರಿಯ ಆಂಜನೇಯ ಗುಡಿಯು ಬಹು ಹಳೆಯ ಹಾಗೂ ಚಿಕ್ಕದಾದ ಕಲ್ಲಿನ ದೇವಸ್ಥಾನ. ಒಳಗಿನ ಪ್ರತಿಮೆ ಕೂಡ ಕಲ್ಲಿನದು. ಗುಡಿಯನ್ನು ಯಾವುದೇ ರೀತಿ ನವೀಕರಿಸಿಲ್ಲ. ಆದರೂ ಈ ಜಾಗ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುಮಾರು ೬.೪೫ ವೇಳೆಗೆ ಕೆಳಗೆ ಬಂದು ಮತ್ತೆ ನಮ್ಮ ರೂಮಿನ ಕಡೆ ಹೊರಟೆವು. ಮರುದಿನ ಹಂಪಿ ನೋಡುವ ತಯಾರಿ ಕೂಡ  ಮಾಡಿಕೊಳ್ಳಬೇಕಿತ್ತು.

ಜಯ ಹನುಮಾನ ಙ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ ||
ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ ||
.........

9 comments:

Unknown said...

Wow, wonderful description. Next time please post about Vaali's (Waali) cremation place.

Unknown said...

Super!!! Article odta idre ellu kuda bejaragalla... And omme namgu anjanadri bettakke hogbeku anistide..:)

pushpa said...

Thank you Raj Sir. Next time when I visit Anegundi, will search for Vaali's cremation place.

Thank you Sarasa. Anegundi is close to Dharwad, you must visit the place.

Dr. Umesh.. said...

It's good to see keeping the momentum and enjoying every bit of it for a long time... Appreciate your continued enthusiasm and interesting to note that you have kept the same Josh in writing all the details like you did in the past...Do continue for many more yrs and do share the info..Thank you for sharing...The details...

siddeshwar said...

Thank you, Umesh Sir.

mustangally said...

I have enjoyed everything you've ever posted, Siddeshwar. I am so glad every time I get an email letting me know you've written something new. Greetings from Alexis and Archie in New Mexico. ����

siddeshwar said...

Glad to hear from you, Alexis :)

Shantakumar said...

ತುಂಬಾ ಸುಂದರ ಮತ್ತು ಅದ್ವಿತೀಯವಾದ ಪ್ರವಾಸಕಥನ ಧನ್ಯವಾದಗಳು ನಿಮಗೆ 🚩🕉️😊💐

siddeshwar said...

ಧನ್ಯವಾದಗಳು ಶಾಂತಕುಮಾರವ್ರೆ