ಸೆಪ್ಟೆಂಬರ್ ೨ ರಿಂದ ೪, ೨೦೧೮
ಬೀದರ ಬಂದ ಪ್ರವಾಸಿಗರು ನೋಡಲೇ ಬೇಕಾದ ಮತ್ತೊಂದು ಸ್ಥಳವೆಂದರೆ ಗುರುದ್ವಾರ. ೧೯೪೮ ರಲ್ಲಿ ಸಿಖ್ ಗುರು 'ಗುರು ನಾನಕ್ 'ರವರ ಹೆಸರಿನಲ್ಲಿ ಅಮೃತಶಿಲೆಯಲ್ಲಿ ಕಟ್ಟಲಾದ ಈ ಗುರುದ್ವಾರವು ಕಣ್ಣಿಗೆ ಹಾಗೂ ಮನಸಿಗೆ ತಂಪು ನೀಡುತ್ತದೆ. ಅಷ್ಟೇ ಸ್ವಚ್ಛವಾದ ವಾತಾವರಣ, ಮನೋಹರವಾದ ಸಂಗೀತ ಮನಸ್ಸನ್ನು ತಲ್ಲೀನಗೊಳಿಸುತ್ತದೆ. ಮುಖ್ಯರಸ್ತೆಯಿಂದ ಗುರುದ್ವಾರಕ್ಕೆ ಹೋಗುವ ದಾರಿಗೆ ಮುನ್ನ ಒಂದು ದೊಡ್ಡ ಕಮಾನಿದೆ. ಗುರುದ್ವಾರದ ಪ್ರವೇಶಕ್ಕೂ ಮುನ್ನ ಪಂಜಾಬಿ ಹೋಟೆಲ್ಗಳು , ಅಂಗಡಿಗಳು, ದವಾಖಾನೆ ಎಲ್ಲ ಇವೆ. ನಂತರ ಗುರುದ್ವಾರದ ದೊಡ್ಡ ಪ್ರವೇಶ ದ್ವಾರ. ಒಳಗೆ ಹೋಗುತ್ತಿದ್ದಂತೆ ಒಂದು ಕಡೆ ಪಾರ್ಕಿಂಗ್ ಇದೆ. ಬಲಬದಿಯಲ್ಲಿ ಬಂದ ಪ್ರವಾಸಿಗರಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ಮಾಡಲಾಗಿದೆ. ಎದುರಿಗೆ ಗುರುದ್ವಾರವಿದೆ.
ನಾವು ಬೀದರನಲ್ಲಿ ಇರುವಷ್ಟು ದಿನವೂ ಗುರುದ್ವಾರಕ್ಕೆ ಹೋಗುವದನ್ನು ತಪ್ಪಿಸಲಿಲ್ಲ. ದಿನಪೂರ್ತಿ ಐತಿಹಾಸಿಕ ಸ್ಥಳಗಳನ್ನು ನೋಡುವದು, ಹೋಟೆಲ್ಗೆ ಬಂದು ಸಂಜೆ ಮತ್ತೊಮ್ಮೆ ಸ್ನಾನ ಮಾಡಿ ಗುರುದ್ವಾರಕ್ಕೆ ಹೋಗಿ ಸಮಾಧಾನದಿಂದ ಕುಳಿತು ಸಂಗೀತ ಕೇಳಿ ಬರುವದು ನಮಗೆ ತುಂಬಾ ಹಿತವೆನಿಸುತ್ತಿತ್ತು. ಒಂದು ದಿನ ಬೆಳಿಗಿನ ವಾಕ್ಗೂ ಕೂಡ ಹೋಗಿ ಬಂದೆವು.
ಗುರುದ್ವಾರವನ್ನು ಸುಂದರವಾದ ಕಣಿವೆಯಲ್ಲಿ ಸ್ಥಾಪಿಸಲಾಗಿದೆ, ಇದು ಮೂರು ಕಡೆಗಳಲ್ಲಿ ಬೆಟ್ಟಗಳಿಂದ ಆವೃತವಾಗಿದೆ. ಈ ದೇವಾಲಯವು ದರ್ಬಾರ್ ಸಾಹಿಬ್, ದಿವಾನ್ ಹಾಲ್ ಮತ್ತು ಲಂಗಾರ್ ಹಾಲ್ ಅನ್ನು ಒಳಗೊಂಡಿದೆ. ಸುಖಾಸನ ಕೊಠಡಿಯಲ್ಲಿ, ಗುರು ಗ್ರಂಥ ಸಾಹಿಬ್, ಸಿಖ್ ಪವಿತ್ರ ಗ್ರಂಥವನ್ನು ಇರಿಸಲಾಗಿದೆ. ಲಿಖಾರಿ ರೂಮ್ ಎಂಬ ಪ್ರತ್ಯೇಕ ಕೊಠಡಿ ಇದೆ, ಅಲ್ಲಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ರಸೀದಿಗಳನ್ನು ನೀಡಲಾಗುತ್ತದೆ
ಗುರುದ್ವಾರದ ಮುಖ್ಯದ್ವಾರ. ಈ ಮಹಾದ್ವಾರದ ಮೇಲೆ ಮೂರೂ ಗೋಪುರಗಳನ್ನು ನೋಡಬಹುದು. ಒಂದು ದೊಡ್ಡದು ಎರಡು ಸಣ್ಣ ಗೋಪುರಗಳು. ಗೋಡೆಯ ತುಂಬಾ ಚಿತ್ರ ವಿನ್ಯಾಸವನ್ನು ಕಾಣಬಹುದು. ಇದರ ಮೇಲೆ ಶ್ರೀ ಗುರು ನಾನಕ ದೇವಜಿ ದರ್ಶನ ಮಹಾದ್ವಾರವೆಂದು ಬರೆಯಲಾಗಿದೆ.ಗುರುದ್ವಾರದ ಆವರಣದ ಒಳಗೆ ದೊಡ್ಡ ಮರಗಳಿವೆ. ಅವುಗಳ ಸುತ್ತಲೂ ಕಟ್ಟೆಯನ್ನು ಕಟ್ಟಿ ಹಾಗೂ ಅಲ್ಲಲ್ಲಿ ಬೆಂಚುಗಳನ್ನು ಮಾಡಿ, ಬಂಡ ದರ್ಶನಾರ್ಥಿ ಗಳಿಗೆ ಕುಳಿತುಕೊಳ್ಳಲು ಅನುಕೂಲವನ್ನು ಮಾಡಿದ್ದಾರೆ. ಒಳಗೆ ದರ್ಶನಕ್ಕೆ ಹೋಗುವ ಪ್ರತಿಯೊಬ್ಬರ ತಲೆಯ ಮೇಲೆಯೂ ಬಟ್ಟೆ ಇರಬೇಕಾದುದು ಕಡ್ಡಾಯ. ಯಾರಾದರೂ ಬಟ್ಟೆ ತಂದಿರಲಿಲ್ಲವೆಂದರೆ ಅಲ್ಲಿಯೇ ಗುರುದ್ವಾರದ ಎದುರಿಗೆ ಬಟ್ಟೆ ಇಟ್ಟಿರುತ್ತಾರೆ. ಒಳಗೆ ಹೋಗಿ ಬರಲು ಅವನ್ನು ಉಪಯೋಗಿಸಿ ಮತ್ತೆ ಅಲ್ಲಿಯೇ ಇಟ್ಟು ಬರುವದು ರೂಢಿ.
ಗುರುದ್ವಾರಕ್ಕೆ ಎರಡು ಕಡೆಯಿಂದ ಸೋಪಾನಗಳನ್ನು ಮಾಡಿದ್ದಾರೆ. ಸೋಪಾನಕ್ಕೂ ಮೊದಲು ಕೆಳಗೆ ಸ್ವಲ್ಪ ತೆಗ್ಗು ಮಾಡಿ ಅಲ್ಲಿ ನೀರನ್ನು ಬಿಟ್ಟಿರುತ್ತಾರೆ. ಹೋಗುವವರು ಆ ನೀರಲ್ಲಿ ಕಾಲಿಟ್ಟು ಮುಂದೆ ಹೋಗಬೇಕು. ಇದರರ್ಥ ಒಳಗೆ ಹೋಗುವ ಮೊದಲು ಕಾಲು ತೊಳೆದಂತೆ.
ಮತ್ತೊಂದು ಕೋನದಿಂದ ತೆಗೆದ ಗುರುದ್ವಾರದ ಚಿತ್ರ.
ಚಿತ್ರದಲ್ಲಿರುವದು ಸಿಖ್ ಗುರು ಶ್ರೀ ಗುರುನಾನಕರು. ಕ್ರಿ.ಶ. ೧೫೧೦-೧೫೧೪ ನಡುವೆ ಗುರು ನಾನಕ್ ನಾಗ್ಪುರ್ ಮತ್ತು ಖಾಂಡ್ವಾದ ಮೂಲಕ ಹಿಂದೂ ದೇವಸ್ಥಾನದ ಓಂಕಾರೇಶ್ವರಕ್ಕೆ ಭೇಟಿ ನೀಡಿ ನಾಂದೇಡ್ಗೆ ಭೇಟಿ ನೀಡಿದರು. ನಾಂದೇಡ್ನಿಂದ ಹೈದರಾಬಾದ್ ಮತ್ತು ಗೋಲ್ಕೊಂಡಾ ಕಡೆಗೆ ತೆರಳಿದ ಅವರು ಮುಸ್ಲಿಂ ಸಂತರನ್ನು ಭೇಟಿಯಾದರು ಮತ್ತು ನಂತರ ಪಿದರ್ ಜಲಾಲುದ್ದೀನ್ ಮತ್ತು ಯಾಕೋಬ್ ಅಲಿಯನ್ನು ಭೇಟಿಮಾಡಲು ಬೀದರ್ಗೆ ಬಂದರು.
ಗುರುಗಳು ಅವನ ಜೊತೆಗಾರ ಮಾರ್ದಾನ ಜೊತೆಯಲ್ಲಿ ಬೀದರ್ ಹೊರವಲಯದಲ್ಲಿ ನೆಲೆಸಿದ್ದರು. ಹತ್ತಿರದ ಗುಡಿಸಲುಗಳಲ್ಲಿ ನೆಲೆಸಿದ ಮುಸ್ಲಿಂ ಫಕೀರರು ಗುರುಗಳ ಧರ್ಮೋಪದೇಶ ಮತ್ತು ಬೋಧನೆಗಳ ಬಗ್ಗೆ ಆಸಕ್ತಿ ವಹಿಸಿದರು. ಉತ್ತರದ ಪವಿತ್ರ ಸಂತರ ಬಗ್ಗೆ ಸುದ್ದಿ ಶೀಘ್ರದಲ್ಲೇ ಬೀದರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿತು ಮತ್ತು ಹೆಚ್ಚಿನ ಸಂಖ್ಯೆಯ ಜನರು ಗುರುವಿನ ದರ್ಶನವನ್ನು ಪಡೆಯಲು ಅವರಲ್ಲಿಗೆ ಬರುತ್ತಿದ್ದರು. ಬೀದರ್ ನಲ್ಲಿ ಕುಡಿಯುವ ನೀರಿನ ಕೊರತೆಯಿದತ್ತು. ಬಾವಿಗಳನ್ನು ಅಗೆಯುವ ಜನರ ಎಲ್ಲಾ ಪ್ರಯತ್ನಗಳು ಪ್ರಯೋಜನವಾಗಲಿಲ್ಲ. ಬಾವಿಗಳು ನೀರನ್ನು ಉತ್ಪಾದಿಸಿದರೂ ಸಹ ನೀರು ಕುಡಿಯುವುದಕ್ಕೆ ಅನರ್ಹ ಎಂದು ಕಂಡುಬಂದಿತು.
ಆಗ ಜನರ ಅಳಲನ್ನು ಕೇಳಿ ಗುರು ನಾನಕರು ತಾವು ನಿಂತ ಜಾಗದಲ್ಲಿ ತಮ್ಮ ಕಟ್ಟಿಗೆಯ ಚಪ್ಪಲಿಯಿಂದ ನಾಲ್ಕಾರು ಕಲ್ಲು ಮತ್ತು ಕಟ್ಟಿಗೆಗಳನ್ನು ಬದಿಗೆ ಸರಿಸಿದರು, ಆಗ ಅಲ್ಲಿಂದ ಒಂದು ನೀರಿನ ಚಿಲುಮೆ ಕಂಡಿತು. ಅದಕ್ಕೆ ನಾನಕ್ ಝೀರಾ ಎಂದು ಕರೆಯಲಾಯಿತು. ಆ ತಿಳಿಯಾದ ತಂಪು ಮತ್ತು ಸಿಹಿ ನೀರು ಈ ದಿನದವರೆಗೂ ಅಲ್ಲಿ ಬರುತ್ತದೆ.
ಆ ನಾನಕ್ ಝೀರಾ ನೀರನ್ನು ಒಂದು ಕುಂಡದಲ್ಲಿ ಶೇಖರಿಸಲಾಗುತ್ತದೆ. ಅದನ್ನೇ ಅಮೃತ ಕುಂಡ ಎಂದು ಕರೆಯುತ್ತಾರೆ. ಈ ನೀರಿಂದ ಮೈ ತೊಳೆದರೆ , ನೀರನ್ನು ಕುಡಿದರೆ ಎಲ್ಲ ರೋಗರುಜಿನಗಳು ಹೋಗುತ್ತವೆಂಬುದು ಜನರ ನಂಬಿಕೆ. ಈ ನೀರಿನ ಚಿಲುಮೆ ಸುಮಾರು ೫೦೦ ವರ್ಷಗಳಿಂದ ಹರಿಯುತ್ತಿದೆ. ಯಾವತ್ತೂ ಬತ್ತಿಲ್ಲ ಎಂದು ಹೇಳುತ್ತಾರೆ.
ಕೆಳಗೆ ಚಿತ್ರದಲ್ಲಿ ಕಾಣುತ್ತಿರುವದು ಸಿಖ್ ರ ಚಿಹ್ನೆ. ಇದನ್ನು ಖಂಡ ಎಂದು ಕರೆಯುತ್ತಾರೆ. ಇದು ಮೂರು ಶಸ್ತ್ರಾಸ್ತ್ರಗಳನ್ನು ಮತ್ತು ಒಂದು ವೃತ್ತವನ್ನು ಒಳಗೊಂಡಿದೆ. ಒಂದು ಖಡ್ಗ, ಎರಡು ಕೃಪಣಗಳು ಮತ್ತು ಒಂದು ವೃತ್ತ. ಇದು ಸಿಖ್ ರ ಮಿಲಿಟರಿ ಲಾಂಛನವಾಗಿದೆ.
ಹೊರಗಿಂದ ನೋಡಿದಾಗ ಕಾಣುವ ಗುರುದ್ವಾರದ ಮಹಾದ್ವಾರ.
ಬಿದರಲ್ಲಿ ನೋಡಬಹುದಾದ ಸ್ಥಳಗಳು - what to see in Bidar district.
.........